ಮುಂಡಗೋಡು ಅರಶೀನಗೇರಿಯ ಅಭಿಷೇಕ್ ಹರಸಂಬಿ ಅವರ ವೇಗದ ವಾಹನ ಚಾಲನೆಗೆ ಅಂಕೋಲಾ ಕಮ್ಮಾಣಿಯ ಮಹೇಶ ಸಿದ್ದಿ ಅವರ ಜೀವ ಹೋಗಿದೆ. ಯಲ್ಲಾಪುರ ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಹೇಶ ಸಿದ್ದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಿಲ್ಲ.
ಅಂಕೋಲಾದ ಕಮ್ಮಾಣಿಯಲ್ಲಿ ಮಹೇಶ ಪರಮೇಶ್ವರ ಸಿದ್ಧಿ ಅವರು ವಾಸವಾಗಿದ್ದರು. 22 ವರ್ಷದ ಅವರು ಸೆಪ್ಟೆಂಬರ್ 13ರಂದು ಯಲ್ಲಾಪುರಕ್ಕೆ ಬಂದಿದ್ದರು. ಬೈಕಿನಲ್ಲಿ ಬಂದಿದ್ದ ಮಹೇಶ ಸಿದ್ದಿ ಅವರು ಆ ದಿನ ಸಂಜೆ ಊರಿಗೆ ಮರಳುತ್ತಿದ್ದರು. ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆ ನರ್ಸರಿ ಬಳಿ ಅವರ ಬೈಕಿಗೆ ಕ್ರೂಸರ್ ವಾಹನವೊಂದು ಗುದ್ದಿತು. ಆ ಅಪಘಾತದ ರಭಸಕ್ಕೆ ಮಹೇಶ ಸಿದ್ದಿ ಅವರು ಅಲ್ಲಿಯೇ ಬಿದ್ದು ಗಂಭೀರವಾಗಿ ಗಾಯಗೊಂಡರು.
ಮುoಡಗೋಡು ಅರಶೀನಗೇರಿಯ ಅಭಿಷೇಕ ಸಹದೇವ್ ಹರಸಂಬಿ ಅವರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಅಂಕೋಲಾದಿoದ ಯಲ್ಲಾಪುರ ಕಡೆ ಕ್ರೂಸರ್ ಓಡಿಸಿಕೊಂಡು ಬಂದ ಅವರು ಮುಂದಿದ್ದ ಲಾರಿಯನ್ನು ಓವರ್ ಟೆಕ್ ಮಾಡುವ ಪ್ರಯತ್ನ ಮಾಡಿದ್ದರು. ಲಾರಿ ಹಿಂದಿಕ್ಕುವುದಕ್ಕಾಗಿ ಅವರು ಕ್ರೂಸರ್’ನ ವೇಗ ಹೆಚ್ಚಿಸಿದ್ದು ಆ ಕ್ರೂಸರ್ ಯಲ್ಲಾಪುರದಿಂದ ಅಂಕೋಲಾ ಕಡೆ ಹೊರಟಿದ್ದ ಮಹೇಶ ಸಿದ್ದಿ ಅವರ ಬೈಕಿಗೆ ಗುದ್ದಿತು. ಈ ಅಪಘಾತದಲ್ಲಿ ಬೈಕು ಹಾಗೂ ಕ್ರೂಸರ್ ಎರಡೂ ಜಖಂ ಆದವು.
ಗಾಯಗೊಂಡಿದ್ದ ಮಹೇಶ ಸಿದ್ದಿ ಅವರನ್ನು ಬದುಕಿಸಿಕೊಳ್ಳುವುದಕ್ಕಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅಪಘಾತದ ರಭಸಕ್ಕೆ ಅವರು ಸಾಕಷ್ಟು ನೊಂದಿದ್ದು, ಚಿಕಿತ್ಸೆ ಪರಿಣಾಮಕಾರಿ ಆಗಲಿಲ್ಲ. ಸೆಪ್ಟೆಂಬರ್ 14ರಂದು ಮಹೇಶ ಸಿದ್ದಿ ಅವರು ಹುಬ್ಬಳ್ಳಿಯಲ್ಲಿಯೇ ತಮ್ಮ ಕೊನೆ ಉಸಿರೆಳೆದರು. ಉದ್ಯಮನಗರದ ದಾಮೋದರ ದೇವಿದಾಸ ಸಿದ್ದಿ ಅವರು ಈ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಡಗೋಡು ಅರಶೀನಗೇರಿಯ ಅಭಿಷೇಕ ಸಹದೇವ್ ಹರಸಂಬಿ ಅವರ ದುಡುಕುತನದ ಬಗ್ಗೆ ವಿವರಿಸಿದರು. ಯಲ್ಲಾಪುರ ಪೊಲೀಸರು ಅಭಿಷೇಕ್ ಹರಸಂಬಿ ಅವರ ವಿರುದ್ಧ ಕೇಸು ದಾಖಲಿಸಿದರು.
`ಹೆಲ್ಮೇಟ್ ಧರಿಸಿಯೇ ಬೈಕ್ ಓಡಿಸಿ’