ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಈಶ್ವರ ಮುಕ್ರಿ ಅವರು ಪೊಲೀಸರನ್ನು ದೂಡಿ ಪರಾರಿಯಾಗಿದ್ದು, ಅವರ ವರ್ತನೆ ಬಗ್ಗೆ ಕುಮಟಾ ನ್ಯಾಯಾಲಯ ತೀವೃ ಅಸಮಧಾನವ್ಯಕ್ತಪಡಿಸಿದೆ. ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ತಪ್ಪಿಗೆ ಈಶ್ವರ ಮುಕ್ರಿ ಅವರಿಗೆ 10 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.
ಹೊನ್ನಾವರದಲ್ಲಿನ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಈಶ್ವರ ಕಣಿಯಾ ಮುಕ್ರಿ ಅವರು ಆರೋಪಿಯಾಗಿದ್ದರು. ಈ ಹಿನ್ನಲೆ ಪೊಲೀಸರು ಅವರನ್ನು ಬಂಧಿಸಿದ್ದರು. 2020ರ ಜೂನ್ 6ರಂದು ಪೊಲೀಸರು ಆರೋಪಿಯನ್ನು ಕಾರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದರು. ರಾತ್ರಿ 8 ಗಂಟೆ ಅವಧಿಯಲ್ಲಿ ಈಶ್ವರ ಮುಕ್ರಿ ಅವರು `ಮೂತ್ರ ವಿಸರ್ಜನೆ ಮಾಡಬೇಕು’ ಎಂದಿದ್ದು, ಪೊಲೀಸರು ಅವರನ್ನು ಶೌಚಾಲಯದ ಬಳಿ ಕರೆದೊಯ್ದಿದ್ದರು. ಆಗ, ಅಲ್ಲಿದ್ದ ಪೊಲೀಸರನ್ನು ದೂಡಿದ ಈಶ್ವರ ಮುಕ್ರಿ ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಅದಾದ ನಂತರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತೆ ಅವರನ್ನು ಬಂಧಿಸಿದ್ದರು. ಪೊಲೀಸರಿಂದ ತಪ್ಪಿಸಿಕೊಂಡು ಹೋದ ಬಗ್ಗೆ ಇನ್ನೊಂದು ಕೇಸು ದಾಖಲಿಸಿದ್ದರು. ಈ ಕೇಸು ಕುಮಟಾ ನ್ಯಾಯಾಲಯಕ್ಕೆ ಬಂದಿದ್ದು, ಪೊಲೀಸ್ ಉಪನಿರೀಕ್ಷಕ ರವಿ ಗುಡ್ಡಿ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆಗಿನ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ ಅವರು ಸಾಕ್ಷಿ ವಿಚಾರಣೆ ಮಾಡಿದ್ದರು. ಸದ್ಯ ಕುಮಟಾ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿರುವ ಗಿರೀಶ ನಾಗಪ್ಪ ಪಟಗಾರ ಅವರು ವಾದ ಮಂಡಿಸಿದರು. `ಪೊಲೀಸರನ್ನು ದೂಡಿ ಪರಾರಿಯಾದ ಆರೋಪಿಗೆ ಸೂಕ್ತ ಶಿಕ್ಷೆ ವಿಧಿಸಬೇಕು’ ಎಂದು ಗಿರೀಶ ಪಟಗಾರ ಅವರು ವಾದಿಸಿದರು.
Advertisement. Scroll to continue reading.
ವಿವಿಧ ದಾಖಲೆ ಹಾಗೂ ಸಾಕ್ಷಿ ಗಮನಿಸಿದ ನ್ಯಾಯಾಧೀಶೆ ವರ್ಷ ಶ್ರೀ ಅವರು ಈಶ್ವರ ಮುಕ್ರಿ ಅವರ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಪು ನೀಡಿದರು. ಜೊತೆಗೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ತಪ್ಪಿಗೆ ಅವರಿಗೆ 10 ಸಾವಿರ ರೂ ದಂಡ ವಿಧಿಸಿದರು. ದಂಡ ಪಾವತಿಸದೇ ಇದ್ದರೆ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು.