ಕಾರವಾರದಲ್ಲಿ ಅದ್ಧೂರಿಯಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆದಿದ್ದು, ಆ ವೇದಿಕೆಯಲ್ಲಿ ಭಾಷಣ ಮಾಡಿದ ಶಿಕ್ಷಕರೊಬ್ಬರು `ನಿವೃತ್ತಿ ನಂತರ ನಮಗೆ ಪಾವ್-ಬಾಜಿ ಮಾರಾಟ ಮಾಡುವುದೊಂದೇ ಬದುಕಿಗೆ ದಾರಿ’ ಎಂದು ಹೇಳಿದ್ದಾರೆ. ಶಿಕ್ಷಕರು ಅನುಭವಿಸುತ್ತಿರುವ ಶೋಚನೀಯ ಸ್ಥಿತಿಯ ಬಗ್ಗೆ ಅವರು ಮುಖ್ಯ ವೇದಿಕೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಕಾರವಾರದ ಬಾಡದ ಸಾವಂತ ಭವನದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಂಘಟಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ಜೀವನದಲ್ಲಿ ಮುಂದೆ ಗುರಿ ಇರಬೇಕು. ಹಿಂದೆ ಗುರುವಿರಬೇಕು’ ಎಂದು ಭಾಷಣ ಮಾಡಿದ್ದಾರೆ. ಅದಾದ ನಂತರ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಜೈ ರಂಗನಾಥ್ ಬಿ ಎಸ್ ಅವರು ಮೈಕಿನ ಮುಂದೆ ಬಂದಿದ್ದಾರೆ. ಜೈ ರಂಗನಾಥ ಅವರು ಶಿಕ್ಷಕರ ಶೋಚನೀಯ ಸ್ಥಿತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಅದರಲ್ಲಿಯೂ ಮುಖ್ಯವಾಗಿ `ಪಿಂಚಣಿ ಇಲ್ಲದೇ ಬದುಕಬೇಕಾದ ಶಿಕ್ಷಕರು ನಿವೃತ್ತಿ ನಂತರ ಪಾವ್-ಬನ್ ಮಾರಾಟ ಮಾಡುವ ಸ್ಥಿತಿ ಬರಲಿದೆ’ ಎಂದು ಹೇಳಿದ್ದಾರೆ. `ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವುದಕ್ಕಿಂತ ಬೋಧಕೇತರ ಕೆಲಸಗಳಿಗೆ ಹೆಚ್ಚು ಸಮಯ ಮೀಸಲಿಡಬೇಕಿದೆ. ನಿವೃತ್ತಿಯ ನಂತರ ಪಿಂಚಣಿ ಇಲ್ಲದೆ ಶಿಕ್ಷಕರು ಬ್ರೆಡ್-ಬನ್-ಪಾವ್-ಬಾಜಿ ಮಾರಿ ಜೀವನ ಸಾಗಿಸುವ ಪರಿಸ್ಥಿತಿ ಬರಲಿದೆ. ಇದು ಇಡೀ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ’ ಎಂದವರು ಹೇಳಿದ್ದಾರೆ. `ಪಿಂಚಣಿ ಭಿಕ್ಷೆಯಲ್ಲ, ಅದು ನಮ್ಮ ಸಾಂವಿಧಾನಿಕ ಹಕ್ಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
`ಶಿಕ್ಷಕರ ಸಮಸ್ಯೆ ಕುರಿತು ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ನವೆಂಬರ್ 3ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಎಲ್ಲಾ ನೌಕರರು ಅದರಲ್ಲಿ ಭಾಗವಹಿಸಬೇಕು’ ಎಂದು ಜೈ ರಂಗನಾಥ ಅವರು ಮನವಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣಿ, ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ಸಂತೋಷ್ ಬಂಡಿಕಟ್ಟೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಗಾಂವ್ಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ ಗೌಡ, ಸಂದೀಪ್ ರಾಣಿ, ಮಾದೇವ್ ರಾಣಿ, ಶಿವಾನಂದ ಕದಂ, ಗೀತಾ ಫೆಡ್ನೇಕರ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಉಮೇಶ್ ನಾಯಕ್ ಸ್ವಾಗತಿಸಿದರು. ಪ್ರೀಮಿಯರ್ ಕಾಲೇಜಿನ ಪ್ರಾಚಾರ್ಯ ಗೋವಿಂದಪ್ಪ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೆ ಪ್ರೇರಣೆ ನೀಡಿದ ಶಿಕ್ಷಕರನ್ನು ಗೌರವಿಸಲಾಯಿತು. ದೈಹಿಕ ಶಿಕ್ಷಣ ಪರಿವೀಕ್ಷಕ ವಿಠೋಬಾ ನಾಯಕ್ ವಂದಿಸಿದರು.