`ಶಾಲಾ-ಕಾಲೇಜು ಮಕ್ಕಳಿಗೆ ಆಗುವ ಅನಾನುಕೂಲ ತಪ್ಪಿಸಲು ಯಲ್ಲಾಪುರ ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ಸರ್ಕಲ್ ಬಳಿ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು’ ಎಂದು ಲಾರಿ ಚಾಲಕರ ಸಂಘದವರು ಆಗ್ರಹಿಸಿದ್ದಾರೆ. ಮುಖ್ಯವಾಗಿ `ವಿದ್ಯಾರ್ಥಿನಿಯರ ಸುರಕ್ಷತೆಗೆ ಒತ್ತು ನೀಡುವ ಉದ್ದೇಶಕ್ಕಾಗಿ ಇಲ್ಲಿ ಪೊಲೀಸರ ಹಾಜರಾತಿ ಅನಿವಾರ್ಯ’ ಎಂದವರು ಹೇಳಿದ್ದಾರೆ.
ಗುರುವಾರ ಯಲ್ಲಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಅವರು ಪಿಸೈ ರಾಜಶೇಖರ್ ವಂದಲಿ ಅವರ ಬಳಿ ಮಾತನಾಡಿದ್ದಾರೆ. ಶಾಲೆ ಶುರುವಾಗುವ ಹಾಗೂ ಬಿಡುವ ಅವಧಿಯಲ್ಲಿ ಏಕಾಏಕಿ ಜನ ಜಂಗುಳಿ ಉಂಟಾಗುತ್ತಿದ್ದು, ಆ ಸನ್ನಿವೇಶವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿನಿಯರನ್ನು ಚುಡಾಯಿಸುವುದು ಹಾಗೂ ಹಿಯಾಳಿಸುವುದನ್ನು ತಪ್ಪಿಸುವುದರ ಜೊತೆ ಸಂಚಾರಿ ದಟ್ಟಣೆ ಕಡಿಮೆ ಮಾಡಲು ಬಸ್ ನಿಲ್ದಾನ ಹಾಗೂ ಅಂಬೇಡ್ಕರ್ ಸರ್ಕಲ್ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸುವುದು ಅನಿವಾರ್ಯವಾಗಿದೆ’ ಎಂದವರು ಹೇಳಿದ್ದಾರೆ.
`ಅಂಬೇಡ್ಕರ್ ವೃತ್ತದ ಸಮೀಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವೈಟಿಎಸ್‌ಎಸ್ ಸಂಸ್ಥೆಯಿದ್ದು, 600ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಶಾಲೆಗೆ ಹೋಗುವಾಗ ಹಾಗೂ ಶಾಲೆಯಿಂದ ಮನೆಗೆ ಮರಳುವಾಗ ಅನೇಕರು ಇಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಆ ಅವಧಿಯಲ್ಲಿ ವಾಹನ ಸಂಚಾರವೂ ಜೋರಾಗಿದ್ದು, ಸಂಚಾರಿ ನಿಯಮ ಪಾಲಿಸದೇ ಸಂಚರಿಸುವವರೇ ಅಧಿಕವಾಗಿ ಕಾಣುತ್ತಾರೆ. ಅದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ. ಜನ ಸಂದಣಿ ಆಗುವ ಪ್ರದೇಶದಲ್ಲಿ ಪುಂಡ ಪೋಕರಿ ಕಾಟವೂ ಸಹಜವಾಗಿದ್ದು, ಬಸ್ ನಿಲ್ದಾಣದಲ್ಲಿಯೂ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸುವುದು ಉತ್ತಮ’ ಎಂದು ಮನವಿ ಸಲ್ಲಿಸಿದರು. ಸಂಘಟನೆ ಪ್ರಮುಖರಾದ ಶಂಕರ್ ಅತ್ತರವಾಲ್, ಅಶೋಕ ಮರಾಠಿ, ಸುನಿಲ್ ಮೋರೆಕರ್, ಕರೀಂ ಖಾನ್, ಸಂದೀಪ ವಡ್ಡರ್, ಬಸವರಾಜ್ ನಾಡಿಗೇರ್, ಅಲ್ತಾಪ್ ಶೇಖ್, ಶ್ರೀನಿವಾಸ ಹೊನ್ನಿಗದ್ದೆ ಇತರರು ತುರ್ತು ಕ್ರಮಕ್ಕೆ ಒತ್ತಾಯಿಸಿದರು.
Advertisement. Scroll to continue reading.