`ದಾಂಡೇಲಿ ಬಾಂಬುನಗರದ ಬಳಿ ಡಕಾಯಿತರು ಚಾಕು ಹಿಡಿದು ನಿಂತಿದ್ದಾರೆ’ ಎಂದು ಹೆದರಿಸಿದ ಅಪರಿಚಿತರು ಬಗೂರನಗರದ ಶಾಂತಾ ಪವಾರ್ ಅವರ ಬಳಿಯಿದ್ದ ಚಿನ್ನದ ಸರ ಹಾಗೂ ಬಳೆ ಅಪಹರಿಸಿದ್ದಾರೆ. ಚಾಕು ಹಿಡಿದಿದ್ದ ಡಕಾಯಿತರಿಂದ ಚಿನ್ನ ರಕ್ಷಿಸಿಕೊಳ್ಳುವ ಆತುರಕ್ಕೆ ಬಿದ್ದ 85ರ ವೃದ್ಧೆ ಶಾಂತಾ ಪವಾರ್ ಅವರು ತಮ್ಮ ಮೈಮೇಲಿದ್ದ 2 ಲಕ್ಷ ರೂ ಬೆಲೆಯ ಆಭರಣವನ್ನು ಕಳ್ಳರ ಕೈಗೆ ಕೊಟ್ಟಿದ್ದಾರೆ!
ದಾಂಡೇಲಿಯ ಬಂಗೂರುನಗರದ ಓಲ್ಡ್ ಡಿ ಆರ್ ಟಿ ಬಳಿ ಶಾಂತಾ ಯಲ್ಲಪ್ಪ ಪವಾರ್ ಅವರು ವಾಸವಾಗಿದ್ದಾರೆ. ಅಕ್ಟೊಬರ್ 8ರಂದು ಅವರ ಮನೆಗೆ ಬಂದ ವ್ಯಕ್ತಿಯೊಬ್ಬರು `ಪೋಸ್ಟ್ ಆಫಿಸರ್ ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿದರು. ಹೀಗಾಗಿ ಶಾಂತಾ ಪವಾರ್ ಅವರು ಅಪರಿಚಿತನ ಜೊತೆ ಹೊರಟರು. ಮಂಕಿ ಕ್ಯಾಪ್ ಹಾಕಿದ್ದ ಆತ ಕೆಲ ದೂರ ಕರೆದೊಯ್ಯುವಾಗ ಅಲ್ಲಿ ಇನ್ನೊಬ್ಬ ದಡೂತಿ ದೇಹದ ವ್ಯಕ್ತಿ ಎದುರಿಗೆ ಸಿಕ್ಕರು.
`ಬಾಂಬು ಗೇಟ್ ಬಳಿ ಕೆಲವರು ಚಾಕು ಹಿಡಿದು ನಿಂತಿದ್ದಾರೆ’ ಎಂದು ಆ ದಡೂತಿ ದೇಹದ ವ್ಯಕ್ತಿ ಹೆದರಿಸಿದರು. `ನಿಮ್ಮ ಆಭರಣ ಕೊಡಿ. ಅದನ್ನು ಈ ಜೀಲದಲ್ಲಿ ಭದ್ರವಾಗಿರಿಸಿ ಕೊಡುವೆ’ ಎಂದು ನಂಬಿಸಿದರು. ಇದನ್ನು ನಂಬಿದ ಶಾಂತಾ ಪವಾರ್ ಅವರು ಕತ್ತಿನಲ್ಲಿದ್ದ ಸರ ಹಾಗೂ ಕೈಯಲಿದ್ದ ಬಳೆಗಳನ್ನು ಅವರ ಕೈಗೆ ಕೊಟ್ಟರು. `ಅಲ್ಲಿ ನೋಡಿ ಚಾಕು ಹಿಡಿದವರು’ ಎಂದು ಕೈ ತೋರಿಸಿದ ದಡೂತಿ ದೇಹದ ವ್ಯಕ್ತಿ ಬಂಗಾರವನ್ನು ಜೇಬಿಗಿಳಿಸಿದರು. ಬೂದಿ ಬಣ್ಣದ ಚೀಲದ ಒಳಗೆ ಎರಡು ಕಲ್ಲುಗಳನ್ನು ಹಾಕಿ ಅಜ್ಜಿಯ ಕೈಗೆ ಕೊಟ್ಟರು.
ಅದಾದ ನಂತರ ಆ ಅಪರಿಚಿತರು ಅಲ್ಲಿಂದ ಕಣ್ಮರೆಯಾದರು. ತಮ್ಮ ಬಳಿಯಿದ್ದ ಕೈ ಚೀಲ ತೆರೆದು ನೋಡಿದ ಅಜ್ಜಿಗೆ ಅದರೊಳಗೆ ಕಲ್ಲುಗಳಿರುವುದು ಕಾಣಿಸಿತು. ತಮಗಾದ ಮೋಸದ ಬಗ್ಗೆ ಅವರು ದಾಂಡೇಲಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ನಿಜವಾದ ಡಕಾಯಿತರು ಶೋಧ ನಡೆಸಿದ್ದಾರೆ.