`2005ಕ್ಕೂ ಮೊದಲು ಅರಣ್ಯ ಭೂಮಿ ಅತಿಕ್ರಮಿಸಿ ಬದುಕು ಕಟ್ಟಿಕೊಂಡವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. `ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುತ್ತದೆ. ಅರ್ಹರು ಭೂಮಿ ಹಕ್ಕಿನಿಂದ ವಂಚಿತರಾಗದoತೆ ಎಚ್ಚರಿಕೆವಹಿಸಲಾಗುತ್ತದೆ’ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರಿಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಚಂದ್ರಕಾ0ತ ಕೊಚರೇಕರ ಅವರು ಪ್ರಮುಖರಾದ ಜಿ ಎಂ ಶೆಟ್ಟಿ, ಪಿ ಟಿ ನಾಯ್ಕ, ಗಣೇಶ ನಾಯ್ಕ ಅವರ ಜೊತೆ ಬೆಂಗಳೂರಿಗೆ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಜೊತೆ ಮುಖ್ಯಮಂತ್ರಿಗಳನ್ನು ಅವರು ಭೇಟಿ ಮಾಡಿದರು. ಅರಣ್ಯ ಹಕ್ಕು ಅರ್ಜಿಗಳನ್ನು ಸಾರಾ ಸಗಟು ತಿರಸ್ಕರಿಸಿದ ಪರಿಣಾಮ ಎದುರಾದ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದರು. ಅರಣ್ಯ ಭೂಮಿಯಲ್ಲಿನ ಬಗರ ಹುಕುಂ ಸಾಗುವಳಿಗೆ ಸಂಬoಧಿಸಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಮರುಸಮೀಕ್ಷೆ ನಡೆಸುವದು ಸೇರಿ ಅರಣ್ಯ ಹಕ್ಕುಕಾಯ್ದೆಯ ಪರಿಣಾಮಕಾರಿ ಅನುಷ್ಠಾನಗೊಳಿಸಿ ಜನರಿಗೆ ಭೂಮಿಯ ಹಕ್ಕು ಕೊಡಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಸಲಹೆಗಳನ್ನು ನೀಡಿದರು. ಈ ವೇಳೆ `ಸರಕಾರ ಅರಣ್ಯ ಭೂಮಿ ಸಾಗುವಳಿದಾರರ ಹಿತರಕ್ಷಣೆ ಮಾಡಲು ಬದ್ಧವಾಗಿದೆ. ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಬಡ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅರಣ್ಯ ಭೂಮಿಯಲ್ಲಿನ ಒತ್ತುವರಿಯ ನೈಜ ಸ್ಥಿತಿಯ ಕುರಿತು ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸ್ಥಳ ತನಿಖೆ ನಡೆಸಿ ಉಪವಿಭಾಗೀಯ ಸಮಿತಿಗೆ ವರದಿ ಸಲ್ಲಿಸುವಂತೆ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಅದಾದ ನಂತರ ಈ ನಿಯೋಗದವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ ಯೋಗೇಶ ಅವರನ್ನು ಸಹ ಭೇಟಿ ಮಾಡಿದ್ದು, ಸುಪ್ರೀಂ ಕೋರ್ಟಿಗೆ ಅರಣ್ಯವಾಸಿಗಳ ಪರ ಸರ್ಕಾರದಿಂದ ಅಗತ್ಯ ದ್ರಡೀಕರಣ ಸಲ್ಲಿಸುವಂತೆ ಮನವಿ ಮಾಡಿತು.