ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ ಎಸ್ ಉಗ್ರಪ್ಪ ಅವರು ಜುಲೈ 12ಕ್ಕೆ ಕಾರವಾರಕ್ಕೆ ಬರಲಿದ್ದಾರೆ. ಇಲ್ಲಿನ ಕನ್ನಡ ಭವನದಲ್ಲಿ ಅವರು ಸಮಾನ ಮನಸ್ಕರ ಜೊತೆ ಚಿಂತನ-ಮoಥನ ಸಭೆಯನ್ನು ನಡೆಸಲಿದ್ದಾರೆ.
ಉಗ್ರಪ್ಪ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಅಪಾರ ಅನುಭವಹೊಂದಿದ್ದು, ಸಂಸದರಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಅವರ ಅನುಭವದ ಆಧಾರದಲ್ಲಿ ಹೊಸ ಬಗೆಯ ಹೋರಾಟದ ರೂಪುರೇಷೆ ನಡೆಸಲು ಅವರು ಚಿಂತನೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಜನ ಸಂಖ್ಯೆ ಶೇ 17.1 ಮತ್ತು ಪರಿಶಿಷ್ಟ ಪಂಗಡ ಜನ ಸಂಖ್ಯೆ ಶೇ 6.95ರಷ್ಟಿದೆ. ಅದಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಸಿಕ್ಕಿಲ್ಲ. ಉದ್ಯೋಗ ಮೀಸಲಾತಿಗಳು ಸಹ ಜನ ಸಂಖ್ಯೆಯ ಆಧಾರವಾಗಿಲ್ಲ. ಈ ಹಿನ್ನಲೆ ಸಮಾನ ಮನಸ್ಕರ ಸಭೆ ನಡೆಸಿ ಸಮುದಾಯದ ಜನರ ಜೊತೆ ಚರ್ಚಿಸಲು ಉಗ್ರಪ್ಪ ಅವರು ಕಾರವಾರಕ್ಕೆ ಆಗಮಿಸುತ್ತಿದ್ದಾರೆ.
ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರು, ಮುಖಂಡರು, ಸಮುದಾಯದ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸುವುದು ಮುಖ್ಯವಾಗಿದೆ. ಜಿಲ್ಲಾ ಪರಿಶಿಷ್ಟ ಪಂಗಡ ನೌಕರರ ಜಿಲ್ಲಾಧ್ಯಕ್ಷ ಗಣೇಶ್ ಬಿಷ್ಠಣ್ಣನವರ ಹಾಗೂ ಉತ್ತರ ಕನ್ನಡ ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಪರಿಶಿಷ್ಟ ಪಂಗಡಗಳ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ತಳವಾರ ಅವರು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾರೆ.