ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮ ದಿನದ ಅಂಗವಾಗಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಶಿರಸಿಯ ಕೋಳಿಗಾರ ಸರ್ಕಾರಿ ಶಾಲಾ ಮಕ್ಕಳಿಗೆ ನೀರು ಕುಡಿಸಿದ್ದಾರೆ. ಜೊತೆಗೆ ಆ ಶಾಲಾ ಮಕ್ಕಳಿಗೆ ಅಗತ್ಯವಿರುವ ಕುಡಿಯುವ ನೀರಿನ ಪಿಲ್ಟರ್’ನ್ನು ದೇಣಿಗೆಯಾಗಿ ನೀಡಿದ್ದಾರೆ.
`ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮ ದಿನದಂದು ಶಾಲೆಗೆ ನೀರಿನ ಪಿಲ್ಟರ್ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ. ಕಾಗೇರಿ ಅವರಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವ ಅವಕಾಶ ಸಿಗಲಿ’ ಎಂದು ಈ ವೇಳೆ ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. ಈ ವೇಳೆ `ಈ ಶಾಲೆಯ ಅಡುಗೆ ಕೋಣೆಯ ಕಟ್ಟಡಕ್ಕೆ ನಿರ್ಮಾಣಕ್ಕೆ ಹಣಕಾಸಿನ ಅವಶ್ಯಕತೆ ಇದೆ’ ಎಂದು ಶಾಲೆಯವರು ಹೇಳಿದ್ದಾರೆ. `ಕಷ್ಟದಲ್ಲಿರುವ ಎಲ್ಲರಿಗೂ ನಾನು ಸಹಾಯ ಮಾಡುತ್ತಿದ್ದು, ಕಟ್ಟಡ ನಿರ್ಮಾಣಕ್ಕೂ ನೆರವು ನೀಡುವೆ’ ಎಂದು ಅನಂತಮೂರ್ತಿ ಹೆಗಡೆ ಅವರು ಘೋಷಿಸಿದ್ದಾರೆ.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀನಿವಾಸ ಹೆಗಡೆ ಮಾತನಾಡಿ `ನಾವು ಗಳಿಸುವ ಆಸ್ತಿ ಮತ್ತು ಹಣ ಶಾಶ್ವತವಲ್ಲ. ಆದರೆ, ನಾವು ಮಾಡುವ ಸಮಾಜ ಸೇವೆ ಹಾಗೂ ಹುಟ್ಟಿನಿಂದ ಸಾಯುವವರೆಗೆ ಮಾಡುವ ಸಾಧನೆಗಳು ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತವೆ’ ಎಂದಿದ್ದಾರೆ. ಈ ಸಂದರ್ಭದಲ್ಲಿ ಗ್ರಾ ಪಂ ಮಾಜಿ ಸದಸ್ಯರಾದ ವಿನಾಯಕ ಭಟ್, ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ರಮ್ಯಾ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಖಾ ಜಿ ಕೊಡಸರ, ಶಿಕ್ಷಕಿ ಸುಧಾ ಎಸ್. ಹೆಗಡೆ, ಮಹಾಬಲೇಶ್ವರ್ ಹೆಗಡೆ ಇದ್ದರು.