ಶಿರಸಿ ಅಂಕೋಲಾ,, ಬನವಾಸಿ, ಯಲ್ಲಾಪುರ, ಕಾರವಾರ, ಕುಮಟಾ, ಹಳಿಯಾಳ ಸೇರಿ ಬೇರೆ ಬೇರೆ ಭಾಗಗಳಲ್ಲಿ ಬೈಕ್ ಕದ್ದಿದ್ದ ಶಿರಸಿ ಅರೆಕೊಪ್ಪದ ಖಾಲಿದ್ ಸಾಬ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿರಸಿ ಅರೆಕೊಪ್ಪದ ಖಾಲಿದ್ ಷರೀಫ್ ಸಾಬ್ ಕಾನವಳ್ಳಿ ಸಿಕ್ಕಿಬಿದ್ದ ಬೈಕ್ ಕಳ್ಳ. ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ ಧಾರವಾಡದಲ್ಲಿಯೂ ಖಾಲಿದ್ ಷರೀಫ್ ಸಾಬ್ ಕಾನವಳ್ಳಿ ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಈವರೆಗೂ ಪೊಲೀಸರಿಗೆ ಸಿಕ್ಕಿ ಬೀಳದೇ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗೆ ಈಚೆಗೆ ಅಂಕೋಲಾ ಬಸ್ ನಿಲ್ದಾಣ ಬಳಿಯ ಬೈಕ್ ಎಗರಿಸಿದ್ದು, ಅವರ ಪಾಲಿಗೆ ಮುಳುವಾಗಿದೆ. ವಿಚಾರಣೆ ವೇಲೆ ಖಾಲಿದ್ ಷರೀಫ್ ಸಾಬ್ ಕಾನವಳ್ಳಿ ಅವರು ಶಿರಸಿ, ಬನವಾಸಿ, ಯಲ್ಲಾಪುರ, ಕಾರವಾರ, ಕುಮಟಾ, ಹಳಿಯಾಳದಲ್ಲಿ ಬೈಕ್ ಕದ್ದಿರುವುದು ಗೊತ್ತಾಗಿದೆ.
ಅಂಕೋಲಾ ಬಸ್ ನಿಲ್ದಾಣದ ಬಳಿ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖಾಲಿದ ಷರೀಫ್ ಸಾಬ್ ಕನವಳ್ಳಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಜೂನ್ 26 ರಂದು ಬೆಳಿಗ್ಗೆ ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳ್ಳತನವಾಗಿತ್ತು. ಈ ಕುರಿತು ಸಲ್ಲಿಕೆಯಾಗಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಜುಲೈ 8ರಂದು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತೀವ್ರ ವಿಚಾರಣೆಯ ವೇಳೆ ಆತ ತಾನೇ ಬೈಕ್ ಕದ್ದಿರುವುದನ್ನು ಒಪ್ಪಿಕೊಂಡಿದ್ದು, ಆತನಿಂದ ಕಳ್ಳತನವಾಗಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಕಾರವಾರ ಉಪವಿಭಾಗದ ಡಿವೈಎಸ್ಪಿ ಗಿರೀಶ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ, ಪಿಎಸ್‌ಐ ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ನಾಯ್ಕ, ಮಹಾದೇವ ಸಿದ್ದಿ, ಆಸಿಫ್ ಆರ್ ಕೆ. ಮತ್ತು ಗಿರೀಶ ಲಮಾಣಿ ಅವರನ್ನೊಳಗೊಂಡ ತಂಡದವರು ಆರೋಪಿಯನ್ನು ಬಂಧಿಸಿದ್ದಾರೆ.