ಕಾರವಾರದ ಸದಾಶಿವಗಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಉದ್ಯಮಿ ಶುಭಂ ರಾಣೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಿದರೂ ಪ್ರಯೋಜನವಾಗಿಲ್ಲ. 32ನೇ ವಯಸ್ಸಿನಲ್ಲಿಯೇ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ.
ಶುಭಂ ರಾಣೆ ಅವರು ಜುಲೈ 30ರಂದು ಸದಾಶಿವಗಡದ ದುರ್ಗಾದೇವಿ ದೇವಸ್ಥಾನದಿಂದ ತಾರಿವಾಡ ಕಡೆ ಹೊರಟಿದ್ದರು. ಅಲ್ಲಿನ ಶಮಸುದ್ದಿನ್ ದರ್ಗಾ ಕಪೌಂಡಿಗೆ ಅವರು ಬೈಕು ಗುದ್ದಿದರು. ತಲೆಗೆ ಪೆಟ್ಟಾದ ಕಾರಣ ಅವರನ್ನು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅದಾದ ನಂತರ ಗೋವಾದಲ್ಲಿರುವ ಕೆ ಎಂ ಸಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಆರೈಕೆ ಮಾಡಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಜುಲೈ 10ರಂದು ಶುಭಂ ರಾಣೆ ಅವರು ಸಾವನಪ್ಪಿದರು.
ಶುಭಂ ರಾಣೆ ಅವರು ಹೊಟೇಲ್ ಉದ್ಯಮಿಯಾಗಿದ್ದರು. ಸದಾಶಿವಗಡ, ಮಾಜಾಳಿ, ಚಿತ್ತಾಕುಲಾ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಅವರ ಸ್ನೇಹಿತರಿದ್ದರು. ಹೀಗಾಗಿ ಅವರ ಅಕಾಲಿಕ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದರು. ಶುಭಂ ರಾಣೆ ಅವರ ಅಗಲಿಕೆ ಸದಾಶಿವಗಡ ಭಾಗದ ಜನರಲ್ಲಿ ನೋವು ತಂದಿದ್ದು, ನೂರಾರು ಜನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು.