ಮನೆಗೆ ಹೋಗಲು ಸಹ ರಸ್ತೆ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದ ಗೋಕರ್ಣದ 15 ಕುಟುಂಬಗಳಿಗೆ ಕುಮಟಾದ ನ್ಯಾಯಾಧೀಶರಿಬ್ಬರು ರಸ್ತೆ ಸಂಪರ್ಕ ವ್ಯವಸ್ಥೆ ಮಾಡಿದ್ದಾರೆ. 20 ವರ್ಷಗಳಿಂದ ರಸ್ತೆಗಾಗಿ ಹೋರಾಟ ನಡೆಸುತ್ತಿದ್ದವರಿಗೆ ನ್ಯಾಯಾಧೀಶರಿಬ್ಬರು ದಾರಿ ತೋರಿಸಿದ್ದಾರೆ.
ಕುಮಟಾದ ಗೋಕರ್ಣ ರುದ್ರಪಾದದ ಬಳಿಯ 15 ಕುಟುಂಬದವರು ತಮ್ಮ ನಿತ್ಯದ ಓಡಾಟಕ್ಕೆ ರಸ್ತೆ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದರು. ಸಮುದ್ರ ತೀರದಿಂದ ಅವರು ಓಡಾಡುತ್ತಿದ್ದು, ಅಲ್ಲಿನ ನಾಗರಾಜ ಸುಬ್ಬ ಗೌಡ ಅವರು ಆ ಓಡಾಟಕ್ಕೆ ತಡೆ ಒಡ್ಡಿದ್ದರು. ನಾಗರಾಜ ಗೌಡ ಅವರ ಮಾಲ್ಕಿ ಜಾಗದಿಂದ ಮಾತ್ರ ಉಳಿದವರ ಮನೆಗೆ ಹೋಗಲು ದಾರಿಯಿದ್ದು, ನಾಗರಾಜ ಗೌಡ ಅವರು ರಸ್ತೆ ಬಿಡದ ಕಾರಣ ಎಲ್ಲರೂ ಸಮಸ್ಯೆಗೆ ಸಿಲುಕಿದ್ದರು.
ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಇಲ್ಲದೇ ತೊಂದರೆಯಾದ ಬಗ್ಗೆ ಆ 15 ಕುಟುಂಬದ ಜನ ನ್ಯಾಯಾಲಯದ ಮೊರೆ ಹೋದರು. ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅವರೆಲ್ಲರೂ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ನ್ಯಾಯಾಧೀಶರಾದ ವರ್ಷ ಶ್ರೀ ಹಾಗೂ ಶ್ವೇತಾ ಎಚ್ ಇ ಅವರು ಬಡ ಜನರ ಸಮಸ್ಯೆ ಅರಿತು ನಾಗರಾಜ ಗೌಡ ಅವರನ್ನು ಕೋರ್ಟಿಗೆ ಕರೆಯಿಸಿದರು.
`ಬೇರೆ ದಾರಿ ಇಲ್ಲದೇ 15 ಜನ ಸಮಸ್ಯೆ ಅನುಭವಿಸುತ್ತಿದ್ದು, ಅವರಿಗೆ ರಸ್ತೆ ಬಿಟ್ಟುಕೊಡಿ’ ಎಂದು ನ್ಯಾಯಾಧೀಶೆಯರಿಬ್ಬರೂ ನಾಗರಾಜ ಗೌಡ ಅವರಿಗೆ ಸೂಚಿಸಿದರು. ರಸ್ತೆ ಇಲ್ಲದ ಕಾರಣ ಅಲ್ಲಿನವರು ಅನುಭವಿಸುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಅದಾದ ನಂತರ ನಾಗರಾಜ ಗೌಡ ಅವರು ಸಹ ಸ್ವ ಖುಷಿಯಿಂದ ಜನರ ಓಡಾಟಕ್ಕೆ ರಸ್ತೆ ಬಿಡುವುದಾಗಿ ಘೋಷಿಸಿದರು. ಜನರ ಓಡಾಟಕ್ಕೆ ಅನುಕೂಲವಾಗುವ ಹಾಗೇ ತಮ್ಮ ಸ್ವಂತ ಭೂಮಿಯಲ್ಲಿ 2 ಅಡಿ ಕಾಲು ದಾರಿ ಕೊಡುವುದಾಗಿ ಅವರು ಹೇಳಿದರು.
20 ವರ್ಷಗಳಿಂದ ಜನ ಅನುಭವಿಸುತ್ತಿದ್ದ ಸಮಸ್ಯೆ ಪರಸ್ಪರ ರಾಜಿ-ಸಂದಾನದಿAದ ಬಗೆಹರಿಯಿತು. ಅಲ್ಲಿದ್ದ ವಕೀಲರು ಸಹ ಚಪ್ಪಾಳೆ ಹೊಡೆದು ನಾಗರಾಜ ಗೌಡ ಅವರ ನಿರ್ಧಾರ ಸ್ವಾಗತಿಸಿದರು.