`ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಪ್ರಕೃತಿ ವಿಕೋಪದಿಂದ ಮನೆ ಮುರಿದ 24 ತಾಸಿನಲ್ಲಿ ಪರಿಹಾರ ಸಿಗುತ್ತಿತ್ತು. ಆದರೆ, ಇದೀಗ ಪರಿಹಾರ ಸಿಗುವುದೇ ಕಷ್ಟವಾಗಿದೆ’ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಶಿರಸಿಯ ಹುತ್ಗಾರ್ ಬಳಿಯ ಪುಟ್ಟನಮನೆಗೆ ಭೇಟಿ ನೀಡಿದ ಅವರು ಶಿವಾನಂದ ಗೊಂಡೇನಹಳ್ಳಿ ಅವರ ಅಳಲು ಆಲಿಸಿದ್ದು, ಅದಾದ ನಂತರ ಸರ್ಕಾರಿ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
`ಶಿವಾನಂದ ಗೊಂಡೇನಹಳ್ಳಿ ಅವರ ಮನೆ ಮುರಿದು ನಾಲ್ಕು ದಿನವಾಗಿದೆ. ಅಧಿಕಾರಿಗಳು ಈವರೆಗೆ ಹಾನಿ ವರದಿ ಸಲ್ಲಿಸಿಲ್ಲ. ಮಳೆ ಬಂದರೆ ಮತ್ತೆ ಧರೆ ಕುಸಿಯುವ ಆತಂಕವಿದೆ. ಧರೆಗೆ ಅವೈಜ್ಞಾನಿಕ ತಡೆಗೋಡೆ ನಿರ್ಮಿಸಿರುವುದು ಇನ್ನಷ್ಟು ಸಮಸ್ಯೆಗೆ ಕಾರಣ’ ಎಂದವರು ಹೇಳಿದ್ದಾರೆ. `ಔಷಧಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುವ ಶಿವಾನಂದ ಅವರಿಗೆ ತಕ್ಷಣ ಪರಿಹಾರ ಸಿಗಬೇಕು’ ಎಂದು ಆಗ್ರಹಿಸಿದ್ದಾರೆ. ವೈಯಕ್ತಿಕವಾಗಿ ಅನಂತಮೂರ್ತಿ ಹೆಗಡೆ ಅವರು ನೆರವು ನೀಡಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳಿಗೆ ಫೋನ್ ಮಾಡಿದ ಅನಂತಮೂರ್ತಿ ಹೆಗಡೆ ಅವರು ಸಮಸ್ಯೆ ಬಗ್ಗೆ ವಿವರಿಸಿದ್ದು, ತಕ್ಷಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಆನಂದ್ ಸಾಲೇರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ್, ಹುತ್ತಗಾರು ಗ್ರಾ ಪಂ ಮಾಜಿ ಸದಸ್ಯ ಫಕೀರಪ್ಪ ಜೊತೆಯೂ ಅವರು ಚರ್ಚಿಸಿದ್ದಾರೆ.