ಹುಲಿ ಗಣತಿ ಮಾಡುವುದಕ್ಕಾಗಿ ಅರಣ್ಯ ಇಲಾಖೆಯವರು ಕಾಡಿನಲ್ಲಿ ಅಡಗಿಸಿಟ್ಟಿದ್ದ ಕ್ಯಾಮರಾ ಕದ್ದ ದುರ್ಗಾ ಹರಿಕಂತ್ರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕದ್ದ ಕ್ಯಾಮರಾ ಬಳಕೆ ಮಾಡಲು ಬರದೇ ಅವರು ಸಿಕ್ಕಿ ಬಿದ್ದಿದ್ದಾರೆ!
ದೇಶದ ಎಲ್ಲಡೆ ಹುಲಿ ಗಣತಿ ಕಾರ್ಯ ನಡೆಯುತ್ತಿದ್ದು, ಅರಣ್ಯ ಇಲಾಖೆಯವರು ಅದಕ್ಕಾಗಿ ಕಾಡಿನಲ್ಲಿ ಕ್ಯಾಮರಾ ಅಳವಡಿಸಿದ್ದರು. ಅಂಕೋಲಾ ಅರಣ್ಯದಲ್ಲಿಯೂ ಕ್ಯಾಮರಾ ಅಳವಡಿಕೆ ನಡೆದಿದ್ದು, ಅಲ್ಲಿದ್ದ ಕ್ಯಾಮರಾ ಕಳ್ಳರ ಪಾಲಾಗಿತ್ತು. ಈ ಕುರಿತು ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಜಿರಗಾಳೆ ಅವರು ಮೇ 16ರಂದು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 1ರಂದು ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ “ಕಡಿಬ್ಯಾಕ್” ಕಂಪನಿಯ ಆಫ್‌ಲೈನ್ ಕ್ಯಾಮರಾ ಕಾಣೆಯಾದ ಬಗ್ಗೆ ಅವರು ದೂರಿದ್ದರು.
ಕ್ಯಾಮರಾ ಹುಡುಕಾಟಕ್ಕೆ ಪೊಲೀಸರು ತನಿಖಾ ತಂಡ ರಚಿಸಿದ್ದು, ಕೋಳಗಿ – ಹಿಲ್ಲೂರು ಬಳಿಯ ದುರ್ಗಾ ದೇವು ಹರಿಕಾಂತ್ರ (54) ಅವರ ಮೇಲೆ ಅನುಮಾನ ಮೂಡಿತು. ವಿಚಾರಣೆ ನಡೆಸಿದಾಗ ಕ್ಯಾಮರಾ ಕದ್ದಿದನ್ನು ಅವರೇ ಒಪ್ಪಿಕೊಂಡರು. ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ ನಿಂಗೋಳ್ಳಿ, ಪಿಎಸ್‌ಐ ಲಲಿತಾ ರಜಪೂತ ಅವರು ಕ್ಯಾಮರಾ ಕಳ್ಳನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.