ಫೆಸ್‌ಬುಕ್ ಮೂಲಕ ಹಾಡು ಹಾಡಿ ಜನರನ್ನು ರಂಚಿಸುತ್ತಿದ್ದ ಕುಮಟಾದ ಶ್ರೀಧರ ಹೆಗಡೆ ಅವರು ಬಹುಮಾನದ ಆಸೆಗೆ ಬಿದ್ದು 73 ಸಾವಿರ ರೂ ಕಳೆದುಕೊಂಡಿದ್ದಾರೆ. ಅವರ ಹಾಡು ಕೇಳಿದ ಅಭಿಮಾನಿಯೊಬ್ಬರು 60 ಲಕ್ಷ ರೂ ಮೌಲ್ಯದ ಬಹುಮಾನ ಕೊಡುವುದಾಗಿ ನಂಬಿಸಿ, ಶ್ರೀಧರ ಹೆಗಡೆ ಅವರಿಂದಲೇ ಹಣ ವಸೂಲಿ ಮಾಡಿದ್ದಾರೆ.
ಕುಮಟಾದ ಮೂರುರು ಬಳಿಯ ಕೋಣಾರೆಯಲ್ಲಿ ಶ್ರೀಧರ ಗಜಾನನ ಹೆಗಡೆ (ಎಸ್ ಜಿ ಹೆಗಡೆ) ಅವರು ವಾಸವಾಗಿದ್ದಾರೆ. 50 ವರ್ಷದ ಅವರು ಕೃಷಿಕರಾಗಿ ಬದುಕು ಕಟ್ಟಿಕೊಂಡಿದ್ದಾರೆ. ವಕೀಲ ವೃತ್ತಿಯನ್ನು ಮಾಡುವ ಅವರು ಸತ್ಯ, ನ್ಯಾಯ, ಧರ್ಮದ ಹೋರಾಟ ನಡೆಸಿದ್ದಾರೆ. ಕಾನೂನು ವಿಷಯದಲ್ಲಿ ಅನೇಕರಿಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ. ಇದೆಲ್ಲದರ ಜೊತೆ ಶ್ರೀಧರ ಹೆಗಡೆ ಅವರಿಗೆ ಹಾಡುವ ಹವ್ಯಾಸವಿದ್ದು, ಆಗಾಗ ಫೇಸ್‌ಬುಕ್ ಮೂಲಕ ಅವರು ತಮ್ಮ ಗಾಯನ ಪ್ರಸ್ತುತಪಡಿಸುತ್ತಾರೆ. ಅವರ ಹಾಡು ಕೇಳಿದ ಅನೇಕರು ಮೆಚ್ಚುಗೆಯನ್ನು ಸಹ ಸೂಚಿಸುತ್ತಿದ್ದಾರೆ.
ಜನರ ಮೆಚ್ಚುಗೆಯಿಂದ ಖುಷಿ ಅನುಭವಿಸಿದ ಶ್ರೀಧರ ಹೆಗಡೆ ಅವರು ಮತ್ತೆ ಮತ್ತೆ ಹಾಡುಗಳನ್ನು ಅಪ್ಲೋಡ್ ಮಾಡುತ್ತಿದ್ದು, ಈ ವೇಳೆ ಅವರಿಗೆ ಅನಾಮದೇಯ ಅಭಿಮಾನಿಯೊಬ್ಬರು ಪರಿಚಿತರಾಗಿದ್ದಾರೆ. ಕಮೆಂಟ್ ಬಾಕ್ಸಿನ ಮೂಲಕ ಅವರು ಶ್ರೀಧರ ಹೆಗಡೆ ಅವರನ್ನು ಮಾತನಾಡಿಸಿ ಫೋನ್ ಸಂಖ್ಯೆ ಪಡೆದಿದ್ದಾರೆ. ಅದಾದ ನಂತರ ಫೋನ್ ಮಾಡಿ ಅವರ ಹಾಡಿನ ಬಗ್ಗೆ ಹೊಗಳಿ ಹುರಿದುಂಬಿಸಿದ್ದಾರೆ. ಅಭಿಮಾನಿಯ ಮೆಚ್ಚುಗೆಯ ಮಾತುಗಳನ್ನು ಆಲಿಸಿದ ಶ್ರೀಧರ ಹೆಗಡೆ ಅವರು ಆ ಖುಷಿ ಅನುಭವಿಸಿದ್ದಾರೆ.
ಅದಾದ ನಂತರ ಫೋನ್ ಮಾಡಿದ ಅಭಿಮಾನಿ, ಶ್ರೀಧರ ಹೆಗಡೆ ಅವರಿಗೆ 60 ಲಕ್ಷ ರೂ ಮೌಲ್ಯದ ಬಹುಮಾನ ಕಳುಹಿಸುವುದಾಗಿ ಹೇಳಿದ್ದಾರೆ. ತೀರಾ ಸಂಕೋಚದಿAದಲೇ ಶ್ರೀಧರ ಹೆಗಡೆ ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಜನವರಿ 5ರಂದು ಶ್ರೀಧರ ಹೆಗಡೆ ಅವರಿಗೆ ಬಹುಮಾನ ಕಳುಹಿಸುವುದಾಗಿ ಹೇಳಿದ ಅಪರಿಚಿತ ಅಭಿಮಾನಿ, ಮತ್ತೆ ಎರಡು ದಿನದ ನಂತರ ಫೋನ್ ಮಾಡಿ ಆ ಬಹುಮಾನಗಳು ದೆಹಲಿ ವಿಮಾನ ನಿಲ್ದಾಣ ತಲುಪಿರುವುದಾಗಿ ನಂಬಿಸಿದ್ದಾರೆ. ಅಲ್ಲಿಂದ ಅದನ್ನು ಬಿಡಿಸಿಕೊಳ್ಳಲು 15 ಸಾವಿರ ರೂ ಬೇಕು ಎಂದಿದ್ದಾರೆ. 60 ಲಕ್ಷ ರೂ ಮೌಲ್ಯದ ಬಹುಮಾನ ಸ್ವೀಕರಿಸಲು 15 ಸಾವಿರ ರೂ ಕೊಡಲು ಶ್ರೀಧರ ಹೆಗಡೆ ಅವರು ಒಪ್ಪಿ, ಅನಾಮದೇಯ ನೀಡಿದ ಬ್ಯಾಂಕ್ ಆಫ್ ಮಹಾರಾಷ್ಟ ಖಾತೆಗೆ ಹಣ ಹಾಕಿದ್ದಾರೆ.
ಅದಾದ ನಂತರ ಮತ್ತೆ ಫೋನ್ ಮಾಡಿದ ಆ ಅಪರಿಚಿತ ಅಭಿಮಾನಿ, ಮತ್ತೆ 58500ರೂ ಹಣಪಡೆದಿದ್ದಾರೆ. ಆದರೆ, ಎಷ್ಟು ದಿನ ಕಳೆದರೂ ಶ್ರೀಧರ ಹೆಗಡೆ ಅವರಿಗೆ 60 ಲಕ್ಷ ರೂಪಾಯಿಯ ಬಹುಮಾನ ಮಾತ್ರ ಬಂದಿಲ್ಲ. ಮೋಸ ಹೋಗಿರುವುದನ್ನು ಅರಿತ ಅವರು ಸೈಬರ್ ಸಹಾಯವಾಣಿಗೆ ಫೋನ್ ಮಾಡಿ ದೂರು ನೀಡಿದ್ದಾರೆ.