ಉತ್ತರ ಕನ್ನಡ ಜಿಲ್ಲೆಯ ವಿವಿಧಡೆ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತ, ಮರ ಮುರಿದಿರುವಿಕೆ ಸಾಮಾನ್ಯವಾಗಿದೆ.
ಕರಾವಳಿ ಭಾಗದಲ್ಲಿ ಗುರುವಾರ ಸಂಜೆಯಿoದ ಮಳೆ ಜೋರಾಗಿದೆ. ಕುಮಟಾದ ನೆಲ್ಲಿಕೇರಿಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಬಳಿ ಗುಡ್ಡ ಕುಸಿದು, ಅದರ ಮಣ್ಣು ಬಂಡೆ ಜೊತೆ ಶಾಲೆಯ ಬಾಗಿಲವರೆಗೆ ಬಂದಿದೆ. ಕೆಪಿಎಸ್ ನೆಲ್ಲಿಕೇರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ-ಪ್ರಾಥಮಿಕ ಹಾಗು ಪ್ರೌಢಶಾಲೆಗಳಿದ್ದು, ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತಿನಿತ್ಯ ಮಧ್ಯಾಹ್ನ 1 ಗಂಟೆಗೆ ಈ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಹೈಸ್ಕೂಲಿನ ಹಳೆ ಕಟ್ಟಡದಲ್ಲಿ ಬಡಿಸಲಾಗುತ್ತಿದೆ. ಮಕ್ಕಳು ಊಟಕ್ಕೆ ಹೋಗುವ ಸಮಯದಲ್ಲಿ ಬಂಡೆ ಕುಸಿದಿದ್ದರಿಂದ ವಿದ್ಯಾರ್ಥಿಗಳೆಲ್ಲರೂ ಪಾರಾಗಿದ್ದಾರೆ.
ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ನಿತ್ಯಾನಂದ ನಾಯ್ಕ ಅವರ ಜೊತೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರು ಆಗಮಿಸಿ, ಅಧಿಕಾರಿ-ಸಿಬ್ಬಂದಿ ನೆರವಿನಿಂದ ಬಂಡೆ ತೆರವು ಮಾಡಿಸಿದ್ದಾರೆ. ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿಯೂ ಭೂ ಕುಸಿತ ಆಗಿದೆ. ಬೈಕ್ ಸವಾರನ ಮೇಲೆ ಮರ ಬಿದ್ದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೂ ಕುಸಿತದ ಪರಿಣಾಮ ಕೆಲ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ನಂತರ ರಸ್ತೆ ನಿರ್ವಹಣಾ ಗುತ್ತಿಗೆದಾರರು ಸ್ಥಳಕ್ಕೆ ದೌಡಾಯಿಸಿ, ಮಣ್ಣು ತೆರವು ಮಾಡಿದ್ದಾರೆ.