ಯಲ್ಲಾಪುರದ ಆರತಿಬೈಲ್ ಪ್ರದೇಶದಲ್ಲಿ ಪದೇ ಪದೇ ಅಪಘಾತ ನಡೆಯುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೊಡಬೋಲೆ ಅವರು ಆತಂಕವ್ಯಕ್ತಪಡಿಸಿದ್ದಾರೆ. ಈಚೆಗೆ 7 ಜನ ಸಾವನಪ್ಪಿದ ಸ್ಥಳಕ್ಕೆ ಭೇಟಿ ನೀಡಿದ ಅವರು ಅಪಘಾತ ತಡೆಗೆ ಮುನ್ನಚ್ಚರಿಕೆವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಲ್ಲಾಪುರ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 52ರ ಆರತಿಬೈಲ್ ತಿರುವಿನಲ್ಲಿ ಜು 9ರಂದು ಅಪಘಾತ ನಡೆದಿದ್ದು, ಧಾರವಾಡದ 7 ಜನ ಸಾವನಪ್ಪಿದ್ದರು. ಅನತಿ ದೂರದ ಅರಬೈಲ್ ಘಟ್ಟ ಪ್ರದೇಶದಲ್ಲಿಯೂ ಅಪಾಯಕಾರಿ ತಿರುವುಗಳಿದ್ದು, ಅಲ್ಲಿಯೂ ಪದೇ ಪದೇ ಅಪಘಾತವಾಗುತ್ತಿರುವ ಬಗ್ಗೆ ಸುಷ್ಮಾ ಗೊಡಬೋಲೆ ಅವರು ಅರಿತಿದ್ದರು. ಈ ಹಿನ್ನಲೆ ಈ ಎರಡು ಪ್ರದೇಶಗಳಿಗೆ ಅವರು ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದರು.
`ಅಪಘಾತ ತಡೆಗೆ ವಿವಿಧ ಸೂಚನಾ ಫಲಕ ಅಳವಡಿಸಬೇಕು’ ಎಂದವರು ಸೂಚಿಸಿದರು. ಇದಕ್ಕೂ ಮುನ್ನ ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸಹ ಅವರು ಭೇಟಿ ನೀಡಿ ಪರಿಶಿಲನೆ ಮಾಡಿದರು. ಅದಾದ ನಂತರ ಕಾರವಾರಕ್ಕೆ ಹೋದ ಸುಷ್ಮಾ ಗೊಡಬೋಲೆ ಅವರು ಅಲ್ಲಿ ಅಧಿಕಾರಿಗಳ ಸಭೆ ಮಾಡಿದರು. ಈ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಮುಖ್ಯವಾಗಿ `ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಿರುವುದರಿಂದ ರೈತರಿಗೆ ಕಡಿಮೆ ಅವಧಿಯಲ್ಲಿ ಇಳುವರಿ ನೀಡುವ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. `ಜಿಲ್ಲೆಯಲ್ಲಿ ಶೇ 24ರಷ್ಟು ಮಳೆಯ ಕೊರತೆಯಿರುವುದರಿಂದ ರೈತರು ಹೆಚ್ಚು ನೀರಿನ ಅವಶ್ಯಕತೆ ಬೇಡುವ ಬೆಳೆಗಳನ್ನು ಬೆಳೆಯದೆ ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ಬೆಳಯಬಹುದಾದ ಬೆಳೆಯ ತಳಿಗಳನ್ನು ಭಿತ್ತನೆ ಮಾಡಲು ಪ್ರೋತ್ಸಾಹಿಸಬೇಕು’ ಎಂದರು.
`ಜಿಲ್ಲೆಯಲ್ಲಿನ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಹೊಂದಿರುವ ಮುಂಡಗೋಡು, ಹಳಿಯಾಳ ಮತ್ತು ಯಲ್ಲಾಪುರ ಭಾಗದಲ್ಲಿ ನೀರಿನ ಕೊರತೆಯನ್ನು ತಪ್ಪಿಸಲು ಕೃಷಿ ಹೊಂಡಗಳ ನಿರ್ಮಾಣ, ಬಾವಿ ಮತ್ತು ಬೋರ್ವೆಲ್ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಕಲ್ಪ್ಪಿಸಬೇಕು. ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲೆಯಲ್ಲಿನ ಕೆರೆಗಳಲ್ಲಿನ ನೀರಿನ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆ ನೀರಿನ ಸಂರಕ್ಷಣೆ ಕುರಿತು ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು’ ಎಂದರು.