ಹೊನ್ನಾವರಕ್ಕೆ ಬಂದಿದ್ದ ಚಿತ್ರನಟ ಚೇತನ ಅವರು ಹೊಸ ರಾಜಕೀಯ ಪಕ್ಷ ಕಟ್ಟುವ ಘೋಷಣೆ ಮಾಡಿದ್ದಾರೆ. ಡಿಕೆ ಶಿವಕುಮಾರ ಹಾಗೂ ರಾಹುಲ್ ಗಾಂಧೀ ಆಡಳಿತದ ವಿರುದ್ಧ ಅವರು ತಮ್ಮ ಅಸಮಧಾನವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ `ಅಭಿವೃದ್ಧಿ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಯೋಜನೆಗಳನ್ನು ತಕ್ಷಣ ಕೈ ಬಿಡಬೇಕು. ಪರಿಸರ ವಿರೋಧಿ ಯೋಜನೆಗಳಿಗೆ ಎಲ್ಲಿಯೂ ಅವಕಾಶ ಕೊಡಬಾರದು’ ಎಂದು ಅವರು ಆಗ್ರಹಿಸಿದ್ದಾರೆ. ಹೊನ್ನಾವರಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು, `ಸಾವಿರಾರು ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅಪಾರ ಪ್ರಮಾಣದ ಪರಿಸರ ನಾಶವಾಗಲಿದೆ. ಇದಕ್ಕೆ ಪರ್ಯಾಯವಾಗಿ ಸೋಲಾರ್ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸಬೇಕು’ ಎಂದು ಒತ್ತಾಯಿಸಿದ್ದಾರೆ. `ಈ ಕುರಿತು 30 ಪರಿಸರವಾದಿಗಳ ನಿಯೋಗದ ಜೊತೆ ಸರ್ಕಾರವನ್ನು ಆಗ್ರಹಿಸಲಾಗುತ್ತದೆ’ ಎಂದರು.
`ಅoಡಮಾನ್‌ನಲ್ಲಿ ಕೇಂದ್ರದ ಇಂಥ ಯೋಜನೆಯನ್ನು ವಿರೋಧಿಸುವ ರಾಹುಲ್ ಗಾಂಧಿ, ರಾಜ್ಯದಲ್ಲಿ ತಮ್ಮದೇ ಸರ್ಕಾರ ಇಂತಹ ಯೋಜನೆ ಜಾರಿಗೆ ತರುತ್ತಿರುವುದು ವಿಪರ್ಯಾಸ’ ಎಂದರು. `ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟೊಂಕಾ ಬಂದರಿನಿAದ ಮೀನುಗಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದರು. ಆದರೆ, ಇದೀಗ ಅದನ್ನು ಅವರು ಮರೆತಿದ್ದಾರೆ’ ಎಂದು ದೂರಿದರು. ಕಾವೇರಿ ನೀರು ಹಂಚಿಕೆ ಕುರಿತು ಮಾತನಾಡಿ `ಉಭಯ ರಾಜ್ಯಗಳ ನಡುವೆ ವೈಷಮ್ಯ ಬೆಳೆಸದೆ, ತಮಿಳುನಾಡು ರೈತರ ಬಗ್ಗೆಯೂ ಕಾಳಜಿಯಿಟ್ಟುಕೊಂಡು ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸಬೇಕು’ ಎಂದರು. `ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಭಾಗಕ್ಕೆ ಹಾಗೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ’ ಎಂದು ದೂರಿದರು. `ಮುಂಬರುವ ದಿನಗಳಲ್ಲಿ ಪರಿವರ್ತನಾ ಪರಿಸರವಾದ ಸಿದ್ಧಾಂತದಡಿ ಹೊಸ ರಾಜಕೀಯ ಮಾದರಿಯನ್ನು ಕಟ್ಟುವೆ’ ಎಂದು ಘೋಷಿಸಿದರು.