ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಮುಂದೆ ಶಾಸಕ ಶಿವರಾಮ ಹೆಬ್ಬಾರ್, ಸತೀಶ್ ಸೈಲ್, ಭೀಮಣ್ಣ ನಾಯ್ಕ ಹಾಗೂ ದಿನಕರ ಶೆಟ್ಟಿ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಸಹ ಸಚಿವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿರುವ ಬೆಳೆ ಹಾನಿ, ರಸ್ತೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಮತ್ತು ವಿದ್ಯುತ್ ಮಸ್ಯೆಗಳ ಬಗ್ಗೆ ಸಚಿವ ಲಕ್ಷ್ಮಣ ಸವದಿ ಅವರು ಅಧ್ಯಯನ ನಡೆಸುತ್ತಿದ್ದಾರೆ. ಇದಕ್ಕಾಗಿ ಅಗಸ್ಟ 6 ಹಾಗೂ 7ರಂದು ಕ್ಷೇತ್ರದಲ್ಲಿ ಅವರು ಸಂಚಾರ ನಡೆಸುತ್ತಿದ್ದು, ಮೊದಲ ದಿನ ವಿವಿಧ ಕಡೆ ಸಭೆ ಮಾಡಿದ್ದಾರೆ. ಜೊತೆಗೆ ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು ಶಾಸಕರು ಹಾಗೂ ಅಧಿಕಾರಿಗಳಿಂದ ಬೆಳೆ ಹಾನಿ ಮಾಹಿತಿಪಡೆದಿದ್ದಾರೆ. ಅಡಿಕೆ ಗಿಡಗಳಿಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ, ಕೊಳೆ ರೋಗಗಳನ್ನು ತಡೆಗಟ್ಟುವ ಕುರಿತು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ.
`ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿರುವ ಸಮಸ್ಯೆಗಳಿಂದಾಗಿ ರೈತರಿಗೆ ಆರ್ಥಿಕವಾಗಿ ನಷ್ಟವಾಗಿದ್ದು, ರೈತರಿಗೆ ತುರ್ತಾಗಿ ಪರಿಹಾರ ಒದಗಿಸುವ ಕಾರ್ಯವಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಅಲ್ಪಾವಧಿ, ಮಧ್ಯಂತರ ಹಾಗೂ ದೀರ್ಘಾವಧಿ ಮೂರು ಹಂತಗಳಲ್ಲಿ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುತ್ತದೆ’ ಎಂದವರು ಹೇಳಿದ್ದಾರೆ. `ಎಲ್ಲ ಶಾಸಕರನ್ನು ಒಳಗೊಂಡು ಪಕ್ಷಾತೀತವಾಗಿ ಪ್ರತಿಯೊಂದು ಕ್ಷೇತ್ರದ ಕುರಿತು ಮಾಹಿತಿ ಪಡೆಯುವೆ. ಆಗಿರುವ ಸಮಸ್ಯೆಯ ಕುರಿತು ವಿವಿಧ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ನೀಡುವೆ. ಆ ಮೂಲಕ ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡುವೆ’ ಎಂದವರು ಸಭೆಯಲ್ಲಿ ಹೇಳಿದ್ದಾರೆ.
ಕಾರವಾರ – ಅಂಕೋಲಾ ಶಾಸಕ ಸತೀಶ ಸೈಲ್ ಮಾತನಾಡಿ `ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ದುರಸ್ತಿಗೊಳಿಸುವ ಕಾರ್ಯ ಆಗಬೇಕಿದೆ, ಕೈಗಾ ರಸ್ತೆ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು ತಕ್ಷಣದಲ್ಲಿ ದುರಸ್ತಿಯಾಗಬೇಕಿದೆ’ ಎಂದಿದ್ದಾರೆ. ಶಿರಸಿ – ಸಿದ್ದಾಪುರ ಶಾಸಕ ಭೀಮಣ್ಣ ಟಿ ನಾಯ್ಕ ಅವರು ಮಾತನಾಡಿ `ಶಿರಸಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮೀಣ ರಸ್ತೆಗಳು ಹಾಳಾಗಿವೆ, ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಅಡಿಕೆ ಕೊಳೆರೋಗ ವ್ಯಾಪಕವಾಗಿದ್ದು ಇದಕ್ಕೆ ಸೂಕ್ತ ಔಷಧಿ ಕಂಡುಹಿಡಿದು ರೋಗಕ್ಕೆ ಪರಿಹಾರ ನೀಡಬೇಕಿದೆ. ಮನೆ ಹಾನಿ ಸಂದರ್ಭದಲ್ಲಿ ಸಂತ್ರಸ್ಥರಿಗೆ ಗರಿಷ್ಠ ಪ್ರಮಾಣದ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು `ಹಾರವಾಡದಲ್ಲಿನ ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದರು.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಅವರು ಸಚಿವರ ಜೊತೆಯಿದ್ದು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಶುಕ್ರವಾರ ಸಚಿವರು ಶಿರಸಿ-ಮುಂಡಗೋಡು ಪ್ರವಾಸ ಮಾಡಲಿದ್ದು, ಅಲ್ಲಿಯೂ ಸಮಸ್ಯೆಗಳ ಬಗ್ಗೆ ಶಾಸಕರು ವಿವರಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಇತರರು ಜೊತೆಯಿದ್ದರು.