ಮೀನುಗಾರಿಕೆ ನಡೆಸುವ ದೋಣಿಗಳ ಸಂಪರ್ಕ ಸಾಧನೆಗಾಗಿ ಇಸ್ರೋ ಅಭಿವೃದ್ಧಿಪಡಿಸಿದ ಸಂವಹನ ಸಾಧನದಲ್ಲಿ ದೋಷ ಕಾಣಿಸಿಕೊಂಡಿದೆ. ಈ ಹಿನ್ನಲೆ ದೋಣಿಗಳಿಗೆ ಅಳವಡಿಸಿದ್ದ ಆ ಸಾಧನವನ್ನು ಪೂರೈಕೆ ಮಾಡಿದ ಸಂಸ್ಥೆ ಹಿಂಪಡೆದಿದೆ.
2018ರಲ್ಲಿ ಉಡುಪಿಯಿಂದ ಮಹಾರಾಷ್ಟದತ್ತ ತೆರಳಿದ್ದ ಸುವರ್ಣ ತ್ರಿಭುಜ ಎಂಬ ಮೀನುಗಾರಿಕೆ ದೋಣಿ ಕಣ್ಮರೆಯಾಗಿತ್ತು. ಅದರಲ್ಲಿ ಉತ್ತರ ಕನ್ನಡ, ಉಡುಪಿಯ ಹಲವು ಮೀನುಗಾರರು ನಾಪತ್ತೆಯಾಗಿದ್ದರು. ದೋಣಿಯ ಅವಶೇಷ ಪತ್ತೆಗೆ ಸಾಕಷ್ಟು ಸಮಸ್ಯೆಯಾಗಿತ್ತು. ಈ ವೇಳೆ ಮೀನುಗಾರರ ರಕ್ಷಣೆಗೆ ಸಂವಹನ ಸಾಧನ ಕಡ್ಡಾಯ ಮಾಡಲಾಗಿತ್ತು. ಆದರೆ, ದುಬಾರಿ ಬೆಲೆಯ ಸಂವಹನ ಸಾಧನಗಳನ್ನು ಅಳವಡಿಕೆ ಮೀನುಗಾರರಿಗೆ ಹೊರೆಯಾಗಿದ್ದು, ಅದಾದ ನಂತರ ಸರ್ಕಾರವೇ ಆ ಸಾಧನ ಅಳವಡಿಸಲು ನಿರ್ಧರಿಸಿತ್ತು.
ಈ ಸಾಧನೆ ದೋಣಿಗಳು ಅಪಾಯಕ್ಕೆ ಸಿಲುಕಿದರೆ ರಕ್ಷಣೆಗೆ ಸಂದೇಶ ಕಳಿಸಬಹುದಾದ ವ್ಯವಸ್ಥೆ ಒಳಗೊಂಡಿದೆ. ದೋಣಿಯಲ್ಲಿ ಅಳವಡಿಸುವ ಬಲ್ಬ್ ಗಾತ್ರದ ಸಣ್ಣ ಸಾಧನ ಟ್ರಾನ್ಸ್ಪಾಂಡರ್ ಉಪಗ್ರಹಗಳಿಂದ ಸಂದೇಶ ಪಡೆಯುವ ಕೆಲಸವನ್ನು ಮಾಡಲಿದೆ. ಆ ಸಾಧನದಿಂದ ದೋಣಿ ಎಲ್ಲಿ ಚಲಿಸುತ್ತಿದೆ ಎಂಬ ದತ್ತಾಂಶವೂ ಸುರಕ್ಷಿತವಾಗಿರುತ್ತದೆ. ಇನ್ನು ದೇಶದ ಅಂತಾರಾಷ್ಟಿಯ ಗಡಿ ದಾಟಿದಲ್ಲೂ ಇದು ಎಚ್ಚರಿಕೆ ಸಂದೇಶ ನೀಡುತ್ತದೆ. ಇದರಿಂದ ದೇಶದ ಭದ್ರತೆಗೂ ಬಹಳ ಅನುಕೂಲವಾಗಲಿದೆ. ಆದರೆ, ಸಾಧನೆದಲ್ಲಿನ ದೋಷದಿಂದಾಗಿ ಅದನ್ನು ಹಿಂಪಡೆಯುವ ಕೆಲಸ ನಡೆಯುತ್ತಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ದೋಣಿಗಳು ಅಪಾಯಕ್ಕೆ ಸಿಲುಕಿದರೆ ಸಹಾಯವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆಯಲ್ಲಿ ವೇಸಲ್ ಕಮ್ಯುನಿಕೇಶನ್ ಆಂಡ್ ಸಪೋರ್ಟ್ ಸಿಸ್ಟಂ ಅಳವಡಿಸುತ್ತಿದ್ದು, ಇದಕ್ಕಾಗಿ ಕೇಂದ್ರ ಮೀನುಗಾರಿಕೆ ಇಲಾಖೆ 364 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. 2025ರಲ್ಲಿ ಕರ್ನಾಟಕದಲ್ಲಿ ಅವುಗಳ ಅಳವಡಿಕೆ ಪ್ರಾರಂಭವಾಗಿದ್ದು, ಉತ್ತರ ಕನ್ನಡ ಜಿಲ್ಲೆಗೆ ಕಳೆದ ಒಂದು ವರ್ಷದಲ್ಲಿ 3821ಕ್ಕೂ ಅಧಿಕ ಟ್ರಾನ್ಸ್ಪಾಂಡರ್ ಪೂರೈಕೆಯಾಗಿತ್ತು. 1659 ಸಾಧನಗಳ ಅಳವಡಿಕೆಯೂ ಪೂರ್ಣವಾಗಿತ್ತು. ಅದರಲ್ಲಿ ದೋಷ ಕಾಣಿಸಿದ ಹಿನ್ನಲೆ ಸರ್ಕಾರ ಸದ್ಯ 1648 ಸಾಧನಗಳನ್ನು ಹಿಂಪಡೆದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಸಂಪೂರ್ಣ ಭಾರತೀಯ ತಂತ್ರಜ್ಞಾನದ ವಿಸಿಎಸ್‌ಎಸ್ ವ್ಯವಸ್ಥೆಯನ್ನು ಸಂಸ್ಥೆಯ ವಾಣಿಜ್ಯ ವಿಭಾಗ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್’ನವರು ದೋಣಿಗಳಿಗೆ ಅಳವಡಿಸುವ ಜವಾಬ್ದಾರಿವಹಿಸಿಕೊಂಡಿದ್ದರು. ಈ ಅಳವಡಿಕೆ ಕಾರ್ಯದ ಶೇ 60ರಷ್ಟು ಹಣವನ್ನು ಕೇಂದ್ರ ಹಾಗೂ ಶ 40ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು. ಮೀನುಗಾರರಿಗೆ ಈ ಸಾಧನೆ ಉಚಿತವಾಗಿ ಸಿಗುತ್ತಿದ್ದು, ಸದ್ಯ ಈ ಸಾಧನ ಸರಿಯಿಲ್ಲದ ಕಾರಣ ಅದನ್ನು ಮೀನುಗಾರರಿಂದ ಮರಳಿಪಡೆಯಲಾಗಿದೆ.