ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯವಿಲ್ಲದ ಕಾರಣ ಶಾಲಾ-ಕಾಲೇಜಿಗೆ ಹೋಗಲು ಸಮಸ್ಯೆಯಾಗುತ್ತಿರುವ ಬಗ್ಗೆ ಶಿರಸಿಯ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ. ಸಾರ್ವಜನಿಕ ಸಮಸ್ಯೆ ಕುರಿತು ದಿಢೀರ್ ಆಗಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಬರುವ ಬಸ್ಸಿನಲ್ಲಿ ಅತ್ಯಧಿಕ ಪ್ರಯಾಣಿಕರಿದ್ದು, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಒಂದೇ ಬಸ್ಸಿನಲ್ಲಿ 70ಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸುವದರಿಂದ ನೂಕುನುಗ್ಗಲು ಆಗುತ್ತಿದೆ. ಶಾಲಾ-ಕಾಲೇಜು ಕಲಿಕೆಗೂ ಇದರಿಂದ ಹಿನ್ನಡೆಯಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರ ಮನವಿ ಆಲಿಸಲು ಅಧಿಕಾರಿಗಳು ಬಾರದ ಕಾರಣ ಆಕ್ರೋಶವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ನಡುವೆ ವಾಕ್ಸಮರ ನಡೆದಿದ್ದು, ಕೊನೆಗೆ ಪೊಲೀಸರು ಪರಿಸ್ಥಿತಿ ನಿಭಾಯಿಸಿದ್ದಾರೆ. `ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ ವಿದ್ಯಾರ್ಥಿಗಳ ಮನವಿಯನ್ನು ಆಲಿಸುವವರಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. ಅದಾದ ನಂತರ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಹೋಗಿ ತಮ್ಮ ಸಮಸ್ಯೆ ವಿವರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಿಢೀರ್ ಆಗಿ ಪ್ರತಿಭಟನೆ ಶುರುವಾಗಿದ್ದರಿಂದ ಕೆಲ ಕಾಲ ಗೊಂದಲ ಉಂಟಾಗಿದ್ದು, ನಂತರ ಪರಿಸ್ಥಿತಿ ಸರಿಯಾಗಿದೆ. ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.