ಯಲ್ಲಾಪುರದ ಕಂಪ್ಲಿ ಗ್ರಾಮ ಪಂಚಾಯತ ಆವರಣದಲ್ಲಿ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಬಸವರಾಜ ಬೊಚಳ್ಳಿ ಅವರು ಧ್ವಜಾರೋಹಣ ನೆರವೇರಿಸಿದ್ದು, `ವಿಬಿ-ರಾಮ್ ಜಿ ಯೋಜನೆಯಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದ್ದಾರೆ. `ಊರಿನಲ್ಲಿಯೇ ಉದ್ಯೋಗಪಡೆಯುವುದಕ್ಕಾಗಿ ಕಾರ್ಮಿಕರು ಈ ಯೋಜನೆ ಪ್ರಯೋಜನಪಡೆಯಬೇಕು’ ಎಂದು ಅವರು ಕರೆ ನೀಡಿದ್ದಾರೆ.
`ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ ಆರ್ ಅಂಬೇಡ್ಕರ್ ಮುಂತಾದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವಾಗಿಯೇ ಭಾರತಕ್ಕೆ ಸ್ವಾತಂತ್ರö್ಯ ಸಿಕ್ಕಿದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇಶಕ್ಕಾಗಿ ಹೋರಾಡಿದ ಆ ಮಹಾನ್ ಚೇತನಗಳಿಗೆ ನಾವು ಸದಾ ಋಣಿಯಾಗಿರಬೇಕು’ ಎಂದವರು ಹೇಳಿದ್ದಾರೆ. `ಸಿಕ್ಕಿರುವ ಈ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಮತ್ತು ದೇಶವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಜಾತಿಗೆ, ಧರ್ಮಕ್ಕೆ ಅಂಟಿಕೊಳ್ಳದೆ ಭಾರತೀಯರೆಂಬ ಏಕತೆಯ ಭಾವನೆಯಿಂದ ಬದುಕಬೇಕು’ ಎಂದು ಕರೆ ನೀಡಿದ್ದಾರೆ.
ಪಿಡಿಓ ರವಿ ಪಟಗಾರ ಅವರು ಮಾತನಾಡಿ `ದೇಶದ ಪ್ರಗತಿಗೆ ಶಿಕ್ಷಣ, ಪ್ರಾಮಾಣಿಕತೆ ಮತ್ತು ಶ್ರಮ ಅತ್ಯಂತ ಅವಶ್ಯಕ. ರೈತರು, ಸೈನಿಕರು ಮತ್ತು ಶ್ರಮಿಕರ ಶ್ರಮವೇ ನಮ್ಮ ದೇಶದ ಬೆನ್ನೆಲುಗು. ಅವರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಅವರು ಈ ವೇಳೆ ನೆರೆದ ಜನರಿಗೆ ಮಾಹಿತಿ ನೀಡಿದ್ದಾರೆ. ಭೂ ನ್ಯಾಯ ಮಂಡಳಿ ಸದಸ್ಯ ವಿಕಾಸ ನಾಯ್ಕ ಸೇರಿ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.