ಉಪ್ಪೋಣಿಯ ಸರಳಗಿಯಲ್ಲಿ ಎಂಟು ಕುಟುಂಬದವರಿಗೆ ಉಪ್ಪಾರ ಸಮುದಾಯದವರು ಬಹಿಷ್ಕಾರ ಹಾಕಿದ್ದು, ಮೂರು ವರ್ಷವಾದರೂ ಆ ಬಹಿಷ್ಕಾರದ ಬಿಸಿ ಆರಿಲ್ಲ. ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರು ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ.
ಉತ್ತರ ಕನ್ನಡಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಲಕ್ಷö್ಮಣ ಸವದಿ ಅವರ ಬಳಿ ಬಹಿಷ್ಕಾರಕ್ಕೆ ಒಳಗಾದ ಮಾರುತಿ ಉಪ್ಪಾರ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. `ಚಿತ್ರಾಂಗ ಗೋವಿಂದ ಉಪ್ಪಾರ್, ಗೋಪಾಲ ಗಣಪತಿ ಉಪ್ಪಾರ್, ಗಜಾನನ ಮಾದೇವ ಉಪ್ಪಾರ್, ಸುಬ್ರಹ್ಮಣ್ಯ ರಾಮ ಉಪ್ಪಾರ್, ಗೋಪಿಕಾ ಮಂಜುನಾಥ ಉಪ್ಪಾರ್, ಮಂಗಲಾ ಮಾದೇವ ಉಪ್ಪಾರ್, ಚಂದ್ರಕಾAತ ಗೋವಿಂದ ಉಪ್ಪಾರ್ ಅವರನ್ನು ಸಮುದಾಯದಿಂದ ಬಹಿಷ್ಕರಿಸಲಾಗಿದೆ. ಈ ಕುಟುಂಬದವರ ಜೊತೆ ಯಾರೂ ಮಾತನಾಡುವ ಹಾಗಿಲ್ಲ. ಈ ಕುಟುಂಬದವರು ದೇವರ ಕಾರ್ಯದಲ್ಲಿ ಭಾಗಿಯಾಗುವ ಹಾಗಿಲ್ಲ. ಈ ಕುಟುಂಬದವರ ಮಕ್ಕಳ ಜೊತೆ ಇತರೆ ಮಕ್ಕಳು ಸಹ ಬೆರೆಯುವುದಿಲ್ಲ. ಉಪ್ಪಾರ ಸಮುದಾಯದ ಅಧ್ಯಕ್ಷ ಗಜಾನನ ರಾಮಾ ಉಪ್ಪಾರ್, ಸದಸ್ಯರಾದ ಪ್ರಮೋದ ಗೋಪಾಲ ಉಪ್ಪಾರ್, ಸುರೇಂದ್ರ ಮಂಜುನಾಥ ಉಪ್ಪಾರ್, ರಮೇಶ ಶಂಕರ್ ಉಪ್ಪಾರ್, ಜಯಂತ ನಾರಾಯಣ ಉಪ್ಪಾರ್ ಸೇರಿ ಬಹಿಷ್ಕಾರ ಹಾಕಿದ್ದಾರೆ’ ಎಂದವರು ದೂರಿದ್ದಾರೆ.
`ಮಾರುತಿ ಉಪ್ಪಾರ್ ಅವರು ಸರಳಗಿಯ ಸ್ಮಶಾನಕಾಳಿ ದೇವಾಲಯಕ್ಕೆ ಹೋಗಿ ಪೂಜಿಸುತ್ತಿದ್ದು, ಸದ್ಯ ಅವರಿಗೆ ಅಲ್ಲಿ ಪ್ರವೇಶವಿಲ್ಲ. ಅಲ್ಲಿ ಹೋದರೆ ದಂಡವಿಧಿಸಲಾಗುತ್ತಿದೆ. ಚಂದ್ರಕಾAತ ಉಪ್ಪಾರ್ ಅವರು ರಿಕ್ಷಾ ಓಡಿಸಿ ಜೀವನ, ಅವರ ರಿಕ್ಷಾಗೆ ಯಾರೂ ಹತ್ತುವ ಹಾಗಿಲ್ಲ ಎಂಬ ನಿಷೇಧ ಹೇರಲಾಗಿದೆ. ಆ ರಿಕ್ಷಾ ಓಡಾಡುವ ಸ್ಥಳದಲ್ಲಿ ಬೇಲಿ ನಿರ್ಮಿಸಿ ಸಮಸ್ಯೆ ಮಾಡಲಾಗುತ್ತಿದೆ. ಗಜಾನನ ಮಾದೇವ ಉಪ್ಪಾರ್ ಅವರ ತಂದೆಯವರು ಚಾಮರಾ ದೇವಿ ಪೂಜಿಸಿಕೊಂಡು ಬಂದಿದ್ದು, ಅದಕ್ಕೂ ಬೇಲಿ ಹಾಕಿ ತೊಂದರೆ ಮಾಡಲಾಗಿದೆ. ಸುಬ್ರಹ್ಮಣ್ಯ ರಾಮ ಉಪ್ಪಾರ್ ಅವರು ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರ ಜೊತೆ ಮಾತನಾಡಿದ ಕಾರಣ ದಂಡ ಪಾವತಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಕಡೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಸಂತ್ರಸ್ತರು ದೂರಿದ್ದಾರೆ.
ಸಂತ್ರಸ್ತ ಕುಟುಂಬದವರು ಜನಶಕ್ತಿ ವೇದಿಕೆ ಅಧ್ಯಕ್ ಮಾಧವ ಬಿ ನಾಯಕ್ ಅವರ ಮೂಲಕ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದು, ನ್ಯಾಯಾಕ್ಕಾಗಿ ಅಂಗಲಾಚಿದ್ದಾರೆ. `ಈ ಕುರಿತು ಹಿಂದೆಯೇ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಗಿದ್ದರೂ, ದೂರು ನೀಡಿದ ಬಳಿಕವೂ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿಲ್ಲ’ ಎಂದವರು ಹೇಳಿದ್ದಾರೆ. `ಈ ಸಮಸ್ಯೆಯಿಂದ ಕುಟುಂಬಗಳು ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಿದ್ದು, ತಮ್ಮ ಹಕ್ಕುಗಳ ರಕ್ಷಣೆಗಾಗಿ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪರಿಹಾರ ದೊರೆತಿಲ್ಲ’ ಎಂದು ದೂರಿದ್ದಾರೆ. ಮನವಿಯನ್ನು ಸ್ವೀಕರಿಸಿದ ಸಚಿವ ಲಕ್ಷ್ಮಣ ಸವದಿ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.