ಸಾಲ್ಕಣಿಯಿಂದ ಶಿರಸಿಗೆ ಬರುತ್ತಿದ್ದ ಬಸ್ಸಿನ ಸ್ಟೇರಿಂಗ್ ಕಟ್ ಆಗಿದೆ. ಪರಿಣಾಮ ಆ ಬಸ್ಸು ಗಟಾರಕ್ಕೆ ಹೋಗಿ ಬಿದ್ದಿದೆ. ಬಸ್ಸು ಅಪಘಾತಕ್ಕೀಡಾದರೂ ಅದರೊಳಗಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಸರ್ಕಾರ ಗ್ರಾಮೀಣ ಭಾಗಗಳಿಗೆ ಗುಜುರಿ ಬಸ್ ಓಡಿಸುತ್ತದೆ ಎಂಬ ಆರೋಪ ಹೊಸತಲ್ಲ. ಅದಕ್ಕೆ ಈ ದಿನ ಸಾಲ್ಕಣಿ ಬಸ್ ಸಹ ಸಾಕ್ಷಿಯಾಗಿದೆ. ನೀರ್ನಹಳ್ಳಿ-ಕಲಗಾರ್ ಸಮೀಪ ಬಸ್ಸು ದಾರಿ ತಪ್ಪಿದೆ. ಬಸ್ಸಿನ ಸ್ಟೇರಿಂಗ್ ಕೈಗೆ ಕಿತ್ತು ಬಂದರೂ ಚಾಲಕ ಬಸ್ಸನ್ನು ನಿಧಾನವಾಗಿ ಗಟಾರಕ್ಕಿಳಿಸಿದ್ದಾರೆ. ಗುಜುರಿ ಬಸ್ ಓಡಿಸಿ ರೂಢಿಯಾಗಿದ್ದ ಚಾಲಕ ತಕ್ಷಣ ಸಮಯಪ್ರಜ್ಞೆ ಮೆರೆದಿದ್ದು, ಸ್ಟೇರಿಂಗ್ ತುಂಡಾದರೂ ಬಸ್ಸನ್ನು ನಿಯಂತ್ರಿಸಿದ್ದಾರೆ. ಆ ಮೂಲಕ ಪ್ರಯಾಣಿಕರಿಗೆ ಯಾವುದೇ ಗಾಯ-ನೋವು ಆಗದ ಹಾಗೇ ಜೋಪಾನ ಮಾಡಿದ್ದಾರೆ.
ಬಸ್ಸು ಗಟಾರಕ್ಕೆ ಬಿದ್ದ ಪರಿಣಾಮ ಪ್ರಯಾಣಿಕರು ಆಘಾತಕ್ಕೆ ಒಳಗಾಗಿದ್ದರು. ಅನೇಕರು ಈ ಅವಾಂತರದ ಬಗ್ಗೆ ಆತಂಕದಿAದ ಪ್ರಶ್ನಿಸಿದ್ದರು. ಆಗ, ಚಾಲಕ ತುಂಡಾದ ಸ್ಟೇರಿಂಗನ್ನು ಜನರಿಗೆ ತೋರಿಸಿದ್ದು, ಚಾಲಕನಿಗೆ ಬೈಯುತ್ತಿದ್ದ ಜನ ಸರ್ಕಾರಕ್ಕೆ ಬೈಯಲು ಶುರು ಮಾಡಿದರು. ನಿಗಮದವರು ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿ, ಉತ್ತಮ ಬಸ್ ಓಡಿಸಬೇಕು ಎಂದು ಅಲ್ಲಿದ್ದವರು ಆಗ್ರಹಿಸಿದರು.