ಮಾಧ್ಯಮಗಳಲ್ಲಿ ಪ್ರಕಟವಾಗುವ ಪ್ರತಿ ವರದಿ ಮೇಲೆಯೂ ಜಿಲ್ಲಾಡಳಿತ ಕಣ್ಣಿಟ್ಟಿದ್ದು, ಪ್ರತಿಯೊಂದು ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಮುಖ್ಯವಾಗಿ ಸಮಸ್ಯೆಗಳ ಕುರಿತು ಪ್ರಸಾರವಾದ ವರದಿಗಳಿಗೆ ಸಂಬಂಧಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದೆ.
ಮಾಧ್ಯಮದಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತದ ಗಮನಕ್ಕೆ ತರುತ್ತಿದೆ. ಆ ಮಾಹಿತಿ ಆಧರಿಸಿ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗೆ ವರದಿ ಕೇಳುತ್ತಿದ್ದು, ಆಯಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ. ವಿಷಯದ ಕುರಿತು ಸತ್ಯಾಸತ್ಯತೆ ಪರಿಶೀಲಿಸಿ ಸಮಸ್ಯೆಯ ಕುರಿತು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಒಪ್ಪಿಸುತ್ತಾರೆ. ಆ ಆಧಾರದಲ್ಲಿ ಅಲ್ಲಿನ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ‘ಕಳೆದ ಎರಡು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲಾಡಳಿತ ಸಮಸ್ಯೆ-ಸವಾಲುಗಳ ಕುರಿತು ಮಾಧ್ಯಮದ ವರದಿಗಳ ದಾಖಲೀಕರಣ ಮಾಡಲಾಗಿದೆ. ಪ್ರತಿ ವರದಿಯ ಕುರಿತು ಪಾಲೋಅಪ್ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ. ಭಾರತ ಸರ್ಕಾರದ ವಾರ್ತಾ ಇಲಾಖೆ (PIB) ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ‘ವಾರ್ತಾಲಾಪ’ ಮಾಧ್ಯಮ ಕಾರ್ಯಾಗಾರದಲ್ಲಿ ಲಕ್ಷ್ಮೀಪ್ರಿಯಾ ಅವರು ಈ ವಿಷಯದ ಬಗ್ಗೆ ವಿವರಿಸಿದ್ದಾರೆ.
‘ಸಾರ್ವಜನಿಕರು ನೀಡಿದ ದೂರುಗಳನ್ನು ಜಿಲ್ಲಾಡಳಿತ ದಾಖಲೀಕರಣ ಮಾಡಿ ಕ್ರಮ ಜರುಗಿಸುತ್ತಿದೆ. ಅದರಂತೆ, ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳ ಆಧಾರದಲ್ಲಿಯೂ ಕ್ರಮ ಜರುಗಿಸಲಾಗುತ್ತಿದೆ. ಪ್ರತಿಯೊಂದು ದೂರು, ಸಮಸ್ಯೆ ಬಗ್ಗೆ ಗಮನಹರಿಸಿ ಅದನ್ನು ಬಗೆಹರಿಸುವ ಪ್ರಯತ್ನ ನಡೆದಿದ್ದು ಮಾಧ್ಯಮದವರ ಸಹಕಾರದಲ್ಲಿ ಸಾಕಷ್ಟು ಸಮಸ್ಯೆಗಳು ಬಗೆಹರಿದಿದೆ’ ಎಂದವರು ಹೇಳಿದ್ದಾರೆ. ‘ಮಾಧ್ಯಮದಲ್ಲಿ ಪ್ರಕಟವಾಗುವ ವರದಿಗಳನ್ನು ಆಧರಿಸಿ ಸುಮೋಟೋ ದಾಖಲಿಸಲಾಗುತ್ತಿದೆ. ಸಮಸ್ಯೆಯಿರುವ ಕಡೆ ಅಧಿಕಾರಿಗಳನ್ನು ಕಳುಹಿಸಿ ಅದನ್ನು ಬಗೆಹರಿಸುವ ಕೆಲಸ ನಡೆದಿದೆ. ಮಾಧ್ಯಮ ವರದಿ ಆಧಾರದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ನಿದರ್ಶನಗಳಿವೆ’ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿಲಿಶ್ ಸಸಿ ಅವರು ವಿವರಿಸಿದ್ದಾರೆ.
‘ತಪ್ಪು ಮಾಹಿತಿ ಹಾಗೂ ವದಂತಿ ವ್ಯಾಪಕವಾಗಿ ಹರಡದ ಹಾಗೇ ಮಾಧ್ಯಮಗಳು ಗಮನವಹಿಸಬೇಕು. ಸೈಬರ್ ಕ್ರೈಂ, ನಶಾಮುಕ್ತ ಭಾರತ ಕುರಿತು ಪೊಲೀಸರಿಂದ ಅರಿವು ಮೂಡಿಸುತ್ತಿದ್ದು, ಮಾಧ್ಯಮ ವರದಿಗಳ ಕುರಿತು ಪೊಲೀಸರು ಪ್ರತಿ ತಾಲೂಕಿನಲ್ಲಿಯೂ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಹೇಳಿದ್ದಾರೆ. IPC & BNC ಕಾಯ್ದೆ ನಡುವೆ ಅನೇಕ ಬದಲಾವಣೆಗಳಾಗಿದ್ದು, ಪ್ರತಿಯೊಬ್ಬರು ಆ ಬಗ್ಗೆಯೂ ಅರಿವುಹೊಂದಿರಬೇಕು’ ಎಂದು ಕರೆ ನೀಡಿದರು.