ಮೊಬೈಲಿನಲ್ಲಿ ಹೊಸದಾಗಿ ಬಂದ ಅಪ್ಡೇಟ್ ಕ್ಲಿಕ್ಕಿಸಿದ ಕಾರಣ ಸೀಬರ್ಡ ಸಿಬ್ಬಂದಿ ಭೋಜರಾಜ ಲಮಾಣಿ ಅವರ ಖಾತೆಗೆ ಕನ್ನ ಬಿದ್ದಿದೆ 2.25ಲಕ್ಷ ರೂ ಕಳೆದುಕೊಂಡಿದ್ದಾರೆ.
ಕಾರವಾರದ ಸೀ-ಬರ್ಡ್ ನೌಕರ ಭೋಜರಾಜ ಹನುಮಂತ ಲಮಾಣಿ (44) ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭೋಜರಾಜ ಅವರ ಮೊಬೈಲ್ ಫೋನ್ನ ಡಿಸ್ಪ್ಲೇ ಬಂದ್ ಆಗಿದ್ದು, ಮೊಬೈಲ್ನಲ್ಲಿ ಯಾವುದೋ ಫೈಲ್ ಅಪ್ಡೇಟ್ ಆಗುತ್ತಿರುವುದು ಅವರಿಗೆ ಕಂಡುಬಂದಿತ್ತು. ಇದಾದ ಕೆಲ ಸಮಯದ ಬಳಿಕ ಅವರ ಮೊಬೈಲ್ಗೆ ಬ್ಯಾಂಕ್ ವಹಿವಾಟಿನ ಮೆಸೆಜ್ ಬಂದಿತು.
SBI ಉಳಿತಾಯ ಖಾತೆಯಿಂದ ₹40,000, ಎಸ್ಬಿಐ ಕ್ರೆಡಿಟ್ ಕಾರ್ಡಿನಿಂದ ₹1.65 ಲಕ್ಷ ಹಾಗೂ ಎಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯಿಂದ ₹20,000 ಹಣವನ್ನು ಅಪರಿಚಿತರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಲಾಗಿದೆ.
ಒಟ್ಟು ₹2.25 ಲಕ್ಷ ಹಣ ಕಳೆದುಕೊಂಡಿರುವ ಭೋಜರಾಜ ಅವರು, ತಮ್ಮ ಮೊಬೈಲ್ ಪ್ರವೇಶ ಪಡೆದು ಹಣ ವರ್ಗಾವಣೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.