ಮಾರುತಿ ನಗರದ ಅಂಬೇಡ್ಕರ್ ಶಾಲೆ ಬಳಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸಿದವರ ಮೇಲೆ 14ಕ್ಕೂ ಅಧಿಕ ಪೊಲೀಸರು ದಾಳಿ ಮಾಡಿದ್ದಾರೆ. ಆ ಮೂಲಕ ಶಾಲಾ ಮಕ್ಕಳು ವ್ಯಸನದ ಹಾದಿ ಹಿಡಿಯುವುದನ್ನು ಪೊಲೀಸರು ತಪ್ಪಿಸಿದ್ದಾರೆ.
ದಾಂಡೇಲಿಯ ಮಾರುತಿ ನಗರದ ಅಂಬೇಡ್ಕರ್ ಶಾಲೆ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಕಚೇರಿಗೆ ಫೋನ್ ಬಂದಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಶಿವಾನಂದ ಅಂಬೀಗೇರ್ ಅವರು ತಕ್ಷಣ ಈ ಬಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಪಿಸೈ ಅಮೀನ್ ಎಂ ಅತ್ತಾರ್, ಕಿರಣ ಪಾಟೀಲ್, ಎಸೈ ಮಂಜುನಾಥ ವಾಯ್‌ದೇಮಟ್ಟಿ, ಮೆಹಬೂಬ್ ನಿಂಬುವಾಲೆ ಅವರ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿ ಚಿನ್ಮಯ ಪತ್ತಾರ್, ಜಯನಗೌಡ, ಬಸವರಾಜ ತೇಲಸಂಗ, ಕೃಷ್ಣ ಬೆಳ್ಳುವರಿ, ಸುನೀಲ ಲುಗಾಡೆ, ಪ್ರಸನ್ನಕುಮಾರ ಜಿ ಎನ್, ಬಸವರೆಡ್ಡಿ ವೈ ಕೆ, ಸಂಜು ಎಮ್ಮಿ, ಪರಶುರಾಮ ನಾಗರಾಳ, ಲೋಕೇಶ ದೇವರೆಡ್ಡಿ ಅವರು ಶಾಲೆ ಬಳಿ ದೌಡಾಯಿಸಿದ್ದಾರೆ.
ಆಗ, ಅಲ್ಲಿ ಮಾರುತಿ ನಗರದ ಅಕ್ಷಯ ಶ್ರೀಕಾಂತ ವಾಡೇಕರ್ ಅವರು ಎದುರಾಗಿದ್ದು, ಅವರ ಬಳಿ 114 ಗ್ರಾಂ ಗಾಂಜಾ ಸಿಕ್ಕಿದೆ. ಅವರ ಜೊತೆ ಹಳಿಯಾಳ ಅಡಿಕೆ ಹೊಸೂರಿನ ತೌಸೀಪ್ ನಜೀರ್ ಅಹ್ಮದ್ ಅಜಗಾಂವಕಾರ, ದಾಂಡೇಲಿ ಟೌನ್ ಶಿಪ್’ನ ಸಾಹಿಲ್ ಅನ್ವರ್ ಶೇಖ್ ಹಾಗೂ ದಾಂಡೇಲಿ ಟೌನ್‌ಶಿಪ್’ನ ರಾಜೇಶ ದಯಾನಂದ ಯಾದವ್ ಅವರು ಗಾಂಜಾ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಆ ಎಲ್ಲರಿಂದ 10 ಸಾವಿರ ರೂ ಬೆಲೆಯ 241 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಜೊತೆಗೆ ಗಾಂಜಾ ಮಾರಾಟದಿಂದ ಅವರುಗಳಿಸಿದ್ದ 400ರೂ ಹಣವನ್ನು ಜಪ್ತು ಮಾಡಿದ್ದಾರೆ. ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಆ ಎಲ್ಲಾ ಮಾರಾಟಗಾರರಿಗೆ ಅರಿವು ಮೂಡಿಸಿದ್ದು, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಸೂಚಿಸಿ ಅವರೆಲ್ಲರ ವಿರುದ್ಧ ಕೇಸು ದಾಖಲಿಸಿದ್ದಾರೆ.
`ಮಾದಕ ವ್ಯಸನ ಜೀವನಕ್ಕೆ ಮಾರಕ’