ಚಪ್ಪರಮನೆಯ ರಾಘವೇಂದ್ರ ಹೆಗಡೆ ಅವರು ದುಡ್ಡು ಡಬಲ್ ಮಾಡುವ ಆಮೀಷಕ್ಕೆ ಒಳಗಾಗಿ ಮೋಸ ಹೋಗಿದ್ದಾರೆ. 11.53 ಲಕ್ಷ ರೂ ಕಳೆದುಕೊಂಡ ಅವರು ಸದ್ಯ ಆ ಹಣ ಹುಡುಕಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಸಿದ್ದಾಪುರದ ಚಪ್ಪರಮನೆಯಲ್ಲಿ ರಾಘವೇಂದ್ರ ಗಜಾನನ ಹೆಗಡೆ ಅವರು ವಾಸವಾಗಿದ್ದಾರೆ. 39 ವರ್ಷದ ಅವರು ಖಾಸಗಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ಬಳಿ 11ಲಕ್ಷಕ್ಕೂ ಅಧಿಕ ಹಣವಿದ್ದು, ಅದನ್ನು ಡಬಲ್ ಮಾಡುವ ಆಲೋಚನೆಗೆ ಬಿದ್ದು ಆನ್‌ಲೈನ್ ಟ್ರೇಡಿಂಗ್ ಕಡೆ ಗಮನಹರಿಸಿದ್ದಾರೆ. ಇದನ್ನು ಅರಿತ ವಂಚಕರು ಉಪಾಯವಾಗಿ ರಾಘವೇಂದ್ರ ಹೆಗಡೆ ಅವರ ಬಳಿಯಿದ್ದ ಕಾಸು ಎಗರಿಸಿದ್ದಾರೆ.
`ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ’ ಎಂದು ವಂಚಕರು ಹೆಗಡೆಯವರನ್ನು ನಂಬಿಸಿದ್ದಾರೆ. ಇದಕ್ಕಾಗಿ ರಾಘವೇಂದ್ರ ಹೆಗಡೆ ಅವರು ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ಗೆ ಸೇರಿದ್ದು, 2025ರ ಅಕ್ಟೋಬರ್ 7ರಿಂದ ನವೆಂಬರ್ 5ರವರೆಗೆ ವಿವಿಧ ದಿನಗಳಲ್ಲಿ ಫೋನ್‌ಪೇ, ಯುಪಿಐ, ಆರ್‌ಟಿಜಿಎಸ್ ಹಾಗೂ ನೆಫ್ಟ್ ಮೂಲಕ ಅಲ್ಲಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಎಕ್ಸಿಸ್ ಬ್ಯಾಂಕ್ ಖಾತೆಯಿಂದ 5.53 ಲಕ್ಷ ರೂ ಗೂ ಕೆಡಿಸಿಸಿ ಬ್ಯಾಂಕ್ ಖಾತೆಯಿಂದ 6 ಲಕ್ಷ ರೂ ಹಣ ಜಮಾ ಮಾಡಿದ ಅವರಿಗೆ ಒಮ್ಮೆ ಹಣ ತೆಗೆಯುವ ಮನಸ್ಸಾಗಿದೆ.
ಆದರೆ, ಹೂಡಿಕೆ ಮಾಡಿದ್ದ ಹಣವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಮತ್ತೊಂದು ಹಂತದ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನಷ್ಟು ಹಣ ತುಂಬುವ ಸೂಚನೆ ಬಂದಿದೆ. ಆಗ, ಅನುಮಾನಗೊಂಡ ರಾಘವೇಂದ್ರ ಹೆಗಡೆ ತಾವು ವಂಚನೆಯ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಬಳಿಕ ಅವರು ಸೈಬರ್ ಕ್ರೈಂ ಸಹಾಯವಾಣಿಗೆ ದೂರು ನೀಡಿದ್ದು, 2025ರ ನವೆಂಬರ್ 10ರಂದು ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬAಧ ಎರಡು ಸ್ವೀಕೃತಿ ಸಂಖ್ಯೆಗಳನ್ನೂ ಪಡೆದು ಅದಾದ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ತಮಗಾದ ಮೋಸದ ಬಗ್ಗೆ ದೂರಿದ್ದಾರೆ.
`ಆಮೀಷಗಳಿಗೆ ಬಲಿಯಾಗಬೇಡಿ’