ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋವುಗಳರ ಕಾಟ ಮಿತಿ ಮೀರಿದೆ. ಗೋವುಗಳನ್ನು ಕದಿಯುವವರ ವಿರುದ್ಧ ಪೊಲೀಸರು ಸಾಕಷ್ಟು ಕಠಿಣ ಕ್ರಮ ಜರುಗಿಸಿದರೂ ಕಳ್ಳರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಶಿರಸಿಯಲ್ಲಿ ಮತ್ತೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆಕಳು ಕದ್ದು ಪರಾರಿಯಾಗಿದ್ದಾರೆ.
ಶಿರಸಿಯ ಹುಲೆಕಲ್’ನ ವೈಕುಂಠ ಮಧು ಹುಲೆಕಲ್ ಅವರು ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ. 73ನೇ ವಯಸ್ಸಿನಲ್ಲಿಯೂ ಅವರು ಅತ್ಯಂತ ಶೃದ್ಧೆಯಿಂದ ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಅವರು ಎರಡು ಆಕಳು ಹಾಗೂ ಒಂದು ಹೋರಿಯನ್ನು ಮೇವಿಗೆ ಬಿಟ್ಟಿದ್ದು, ಅದನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಹುಲೆಕಲ್ ಗ್ರಾಮದ ಸತೀಶ ಶೇಟ್ ಹಾಗೂ ಪುಂಡಳಿಕ್ ಬಾಂದೇಕರ್ ಅವರ ಒಡೆತನದ ಜಾನುವಾರುಗಳನ್ನು ಸಹ ದುಷ್ಕರ್ಮಿಗಳು ಒಯ್ದಿದ್ದಾರೆ.
ವೈಕುಂಠ ಹುಲೆಕಲ್ ಅವರ ಜಾನುವಾರುಗಳು 2-3 ದಿನಗಳಿಗೊಮ್ಮೆ ಕೊಟ್ಟಿಗೆಗೆ ಬರುತ್ತಿದ್ದವು. ಈ ಬಾರಿ 13 ದಿನವಾದರೂ ಅವು ಕೊಟ್ಟಿಗೆಗೆ ಬರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವು ಸಿಗಲಿಲ್ಲ. ಹೀಗಾಗಿ ವೈಕುಂಟ ಅವರು ಸೆಂಟ್ ಮಿಲಾಗ್ರಿಸ್ ಬ್ಯಾಂಕಿನವರಿಗೆ ಮನವಿ ಮಾಡಿ ಅವರ ಸಿಸಿ ಕ್ಯಾಮರಾ ದಾಖಲೆ ಪರಿಶೀಲನೆ ಮಾಡಿದರು. ಆಗ, ಅಪರಿಚಿತರಿಬ್ಬರು ಅವರ ಜಾನುವಾರುಗಳನ್ನು ಕಾರಿನಲ್ಲಿ ತುಂಬಿಕೊoಡು ಹೋಗಿರುವುದು ಕಾಣಿಸಿತು.
ಅದರಂತೆ, ಸತೀಶ ಶೇಟ್ ಹಾಗೂ ಪುಂಡಳಿಕ್ ಬಾಂದೇಕರ್ ಅವರ ಜಾನುವಾರುಗಳು ಸಹ ಕೆಲ ದಿನಗಳಿಂದ ಕಾಣುತ್ತಿರಲಿಲ್ಲ. ಅವುಗಳನ್ನು ಸಹ ಕಾರಿನಲ್ಲಿ ಬಂದ ಕಳ್ಳರು ಕದ್ದಿರುವುದು ದೃಢವಾಯಿತು. ಒಟ್ಟು ಆರು ಜಾನುವಾರುಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಅದರಿಂದ ಜಾನುವಾರು ಮಾಲಕರು 58500ರೂ ನಷ್ಟ ಅನುಭವಿಸಿದರು. ಈ ಕಳ್ಳರನ್ನು ಹುಡುಕಿ ಕಠಿಣ ಕ್ರಮ ಜರುಗಿಸುವಂತೆ ವೈಕುಂಠ ಹುಲೆಕಲ್ ಅವರು ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.