ಕದಿಯುವುದಕ್ಕಾಗಿಯೇ ಕುಮಟಾಗೆ ಬರುತ್ತಿದ್ದ ಕಳ್ಳ-ಕುಳ್ಳಿಯರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸರ್ಕಾರಿ ಬಸ್ಸಿಗೆ ಬರುವ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರ ಒಡವೆ ಅಪಹರಿಸುತ್ತಿದ್ದವರು ಜೈಲು ಸೇರಿದ್ದಾರೆ.
ಭದ್ರಾವತಿ ಮೂಲದವರು ಎನ್ನಲಾದ ಸೀಮಾಬಾನು (42) ಮತ್ತು ಶಮ್ಮಾ ಬುಡಿಯಾ (27) ಅವರು ಆಗಾಗ ಕುಮಟಾಗೆ ಬರುತ್ತಿದ್ದರು. ಜನ ಜಂಗುಳಿಯಿರುವ ಪ್ರದೇಶಗಳಿಗೆ ನುಗ್ಗಿ ಅವರು ತಮ್ಮ ಕೈ ಚಳಕ ಪ್ರದರ್ಶಿಸುತ್ತಿದ್ದರು. ಮುಖ್ಯವಾಗಿ ಮಹಿಳೆಯರ ಮಾಂಗಲ್ಯ ಸರ ಕದ್ದು ಅವರು ಪರಾರಿಯಾಗುತ್ತಿದ್ದರು. ಚಿಕ್ಕೊಳ್ಳಿ ನಿವಾಸಿ ಹಾಗೂ ಆರೋಗ್ಯ ಕಾರ್ಯಕರ್ತೆಯಾಗಿರುವ ಭಾರತಿ ಶಿವು ನಾಯಕ ಅವರು ಅಗಸ್ಟ 18ರಂದು ಮಧ್ಯಾಹ್ನ ತಮ್ಮ ಪರ್ಸ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದರು.
100ಕ್ಕೂ ಅಧಿಕ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಿದಾಗ ಕಳ್ಳರ ಸುಳಿವು ಸಿಕ್ಕಿದ್ದು, ಅದೇ ಕಳ್ಳರು ಬಡಾಳ-ಸೊಪ್ಪಿನಹೊಸಳ್ಳಿ ಬಳಿ ತಿರುಗಾಡುವಾಗ ಪೊಲೀಸರು ವಶಕ್ಕೆಪಡೆದರು. ಆ ಕಳ್ಳಿಯರಿಬ್ಬರ ಬಳಿಯಿದ್ದ 20.180 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಅದರ ಮೌಲ್ಯ 260 ಲಕ್ಷ ರೂಪಾಯಿಗಳಾಗಿದ್ದು, ಆರೋಪಿತರಾದ ಸೀಮಾಬಾನು ಮತ್ತು ಶಮ್ಮಾ ಬುಡಿಯಾ ಅವರ ವಿಚಾರಣೆ ಮುಂದುವರೆದಿದೆ. ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಅವರ ನೇತೃತ್ವದಲ್ಲಿ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಮತ್ತು ಗುರು ನಾಯಕ ಅವರ ಕಾರ್ಯಾಚರಣೆಯಿಂದ ಈ ಕಳ್ಳಿಯರಿಬ್ಬರು ಸಿಕ್ಕಿಬಿದ್ದಿದ್ದಾರೆ.