ಕಳೆದ ಕೆಲ ದಿನಗಳಿಂದ ಶಿರಸಿ ಆಡಳಿತ ಸರ್ಕಾರಿ ಅಕ್ಕಿ ಕದ್ದು ಸಾಗಿಸುವವರ ವಿರುದ್ಧ ಸಮರ ಸಾರುತ್ತಿದೆ. ಈ ದಿನ ಒಂದು ಲಾರಿ ತುಂಬ ಅಕ್ಕಿ ಸಾಗಿಸುತ್ತಿದ್ದವರನ್ನು ಅಧಿಕಾರಿಗಳು ಹಿಡಿದಿದ್ದಾರೆ.
ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಜಾಲದ ಹಿಂದೆ ಬಿದ್ದಿರುವ ಆಹಾರ ಇಲಾಖೆ ಅಧಿಕಾರಿಗಳು ಕಂದಾಯ ಹಾಗೂ ಪೊಲೀಸ್ ಇಲಾಖೆ ನೆರವುಪಡೆದು ವಿಶೇಷ ಕಾರ್ಯಾಚರಣೆ ನಡೆಸಿದೆ. ಸಿದ್ದಾಪುರದಿಂದ ಮಹಾರಾಷ್ಟ್ರದ ಕೊಲ್ಲಾಪುರದತ್ತ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳಿಗೆ ಲಾರಿಯೊಂದರಲ್ಲಿ 476 ಚೀಲ ಅಕ್ಕಿ ಸಿಕ್ಕಿದೆ. ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ಶಿರಸಿ ಟೌನ್ ಠಾಣೆಯ ಪಿಎಸ್‌ಐ ನರಸಿಂಹಲು ಅವರ ನೇತೃತ್ವದಲ್ಲಿ ನೀಲೇಕಣಿ ಭೀಮನಗುಡ್ಡ ಕ್ರಾಸ್ ಬಳಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾಳಿಯ ಸುಳಿವು ಅರಿತ ಚಾಲಕ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಪೊಲೀಸರು ಲಾರಿ ಅಡ್ಡಗಟ್ಟಿ ಚಾಲಕನನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ. ಲಾರಿಯ ಪರಿಶೀಲನೆ ನಡೆಸಿದಾಗ ದಾಖಲೆಗಳಿಲ್ಲದೆ ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಲಾರಿಯ ಮುಂದೆ ಕಾರೊಂದು ಚಲಿಸುತ್ತಿದ್ದು, ಈ ಹಗರಣದಲ್ಲಿ ಕಾರಿನಲ್ಲಿದ್ದವರ ಪಾತ್ರ ಏನು? ಎಂಬುದು ಗೊತ್ತಾಗಿಲ್ಲ. ಲಾರಿಯ ಚಲನ-ವಲನ ಗಮನಿಸಿ ಮಾಹಿತಿ ನೀಡಲು ಕಾರಿನಲ್ಲಿದ್ದವರನ್ನು ಬಳಸಿಕೊಳ್ಳಲಾಗಿತ್ತ? ಎಂಬ ಅನುಮಾನ ಮೂಡಿದೆ. ಸರ್ಕಾರ ಬಡವರಿಗಾಗಿ ನೀಡುವ ಅಕ್ಕಿ ಹೊರರಾಜ್ಯದ ಪಾಲಾಗುತ್ತಿರುವ ಕುರಿತು ಸಮಗ್ರ ವಿಚಾರಣೆ ನಡೆಯುತ್ತಿದೆ.