`RSS ಆಕ್ರಮಣಕಾರಿ’ ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರವನ್ನು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಸಮರ್ಥಿಸಿಕೊಂಡಿದ್ದಾರೆ. `ರಾಜಕೀಯದಲ್ಲಿ ಮುಳುಗಿರುವ ಆರ್ ಎಸ್ ಎಸ್ ಸರ್ಕಾರಿ ಸ್ಥಳಗಳನ್ನು ಬಳಕೆ ಮಾಡುವುದನ್ನು ಸಹಿಸಲ್ಲ’ ಎಂದವರು ಹೇಳಿದ್ದಾರೆ.
ಮಂಗಳವಾರ ಯಲ್ಲಾಪುರದಲ್ಲಿ ಮಾತನಾಡಿದ ಅವರು `RSS ಒಂದು ಖಾಸಗಿ ಸಂಸ್ಥೆ. ಬಿಜೆಪಿ ಜೊತೆ ಸೇರಿ ಅದು ರಾಜಕೀಯ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಳುಗಿರುವ RSS ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳಲು ಅವಕಾಶ ಕೊಡಲ್ಲ. ಸರ್ಕಾರಿ ಶಾಲೆ, ಕಾಲೇಜು, ಆವರಣಗಳನ್ನು ಅವರು ಉಪಯೋಗಿಸುವುದು ಸರಿಯಲ್ಲ. ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ’ ಎಂದಿದ್ದಾರೆ.
`ರಾಜಕೀಯೇತರ ಉದ್ದೇಶದ ಸಂಸ್ಥೆ ಆಗಿದ್ದರೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಆರ್ ಎಸ್ ಎಸ್ ರಾಜಕೀಯ ಬಿಟ್ಟು ಬೇರೆನೂ ಮಾಡುತ್ತಿಲ್ಲ. ಆರ್ ಎಸ್ ಎಸ್ ನಿಷೇಧದ ಬಗ್ಗೆ ನಾನು ಮಾತನಾಡಲ್ಲ. ಅವರ ಕೆಲಸ ಅವರು ಮಾಡುವುದಕ್ಕೆ ಅಭ್ಯಂತರ ಇಲ್ಲ. ಆದರೆ, ಸರ್ಕಾರಿ ಸ್ಥಳದಲ್ಲಿ ಸಂಘದ ಚಟುವಟಿಕೆಗಳಿಗೆ ಅವಕಾಶ ಇಲ್ಲ’ ಎಂದು ಪುನರುಚ್ಚರಿಸಿದರು. `ಬಿಜೆಪಿ ಹಾಗೂ ಆರ್ ಎಸ್ ಎಸ್ ಎರಡೂ ಒಂದೇ’ ಎಂದವರು ಹೇಳಿದರು.
ಇದಕ್ಕೂ ಮುನ್ನ ಕಿರವತ್ತಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಹಾಗೂ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಭಾಗವಹಿಸಿದ್ದರು. `ರಾಜ್ಯದಲ್ಲಿ ನಾಲ್ವರು ಬ್ರಾಹ್ಮಣ ಶಾಸಕರಿದ್ದು, ಅದರಲ್ಲಿ ಮೂವರು ಈ ವೇದಿಕೆಯಲ್ಲಿದ್ದಾರೆ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಮಾತ್ರ ಭಾಗವಹಿಸಿಲ್ಲ. ನಾವೆಲ್ಲರೂ ಸೇರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಬಿಜೆಪಿಗರು ಅನಗತ್ಯ ಟೀಕೆ ಮಾಡುತ್ತಿದ್ದಾರೆ’ ಎಂದು ದೂರಿದರು.
ವೇದಿಕೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರನ್ನು ಉದ್ದೇಶಿಸಿ `ನಮ್ಮ ಸರ್ಕಾರ ಸಾಧನೆ ಮಾಡಿದೆ’ ಎಂದರು. ತಕ್ಷಣ ಪ್ರತಿಕ್ರಿಯಿಸಿದ ಶಾಂತರಾಮ ಸಿದ್ದಿ `ಬಿಜೆಪಿಯ ನನ್ನ ಸ್ನೇಹಿತರು ಮಾತ್ರವಲ್ಲ, ನಾನು ಕಾಂಗ್ರೆಸ್ ಟೀಕಿಸುತ್ತೇನೆ’ ಎಂದರು. ತಮ್ಮ ಮಾತು ಮುಂದುವರೆಸಿದ ದಿನೇಶ ಗುಂಡುರಾವ್ ಅವರು `ರಾಜ್ಯದಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಆಶಕಿರಣ ಯೋಜನೆ ಅಡಿ ಉಚಿತ ಕನ್ನಡಕ, ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಜೊತೆ ಇನ್ನಿತರ ಪೌಷ್ಠಿಕ ಆಹಾರ ಮನೆಗೆ ತಲುಪಿಸಲು ಸರ್ಕಾರ ಬದ್ಧವಾಗಿದೆ’ ಎಂದರು.
`ಬಿಪಿ & ಶುಗರ್ ನಿಯಂತ್ರಣಕ್ಕೆ ಜೀವನಶೈಲಿ ಸರಿಪಡಿಸಿಕೊಳ್ಳಿ. ಆರೋಗ್ಯ ಚನ್ನಾಗಿದ್ದರೆ ಮಾತ್ರ ಎಲ್ಲವೂ ಸರಿಯಾಗಿರುತ್ತದೆ’ ಎಂದು ನೆರೆದಿದ್ದ ಸಭೀಕರಿಗೆ ಸಚಿವರು ಕಿವಿಮಾತು ಹೇಳಿದರು. ಸರ್ಕಾರಿ ಸಾಧನೆ ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ ನಡೆದ ಶ್ರಮದ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಇದೇ ವೇದಿಕೆಯಲ್ಲಿ ಮಾತನಾಡಿದರು.