ಯಲ್ಲಾಪುರದ ಅರಬೈಲಿನಲ್ಲಿ ಎರಡು ಲಾರಿಗಳ ನಡುವೆ ಕಾರು ಸಿಲುಕಿದ್ದು, ಕಾರಿನಲ್ಲಿದ್ದ ಅಮ್ಮ-ಮಗಳು ಅಲ್ಲಿಯೇ ಸಾವನಪ್ಪಿದ್ದಾರೆ. ಗೋಕರ್ಣಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ ಅವರಿಬ್ಬರು ಅರ್ದ ದಾರಿಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ನಡೆದಿದೆ. ಲಾರಿಗಳ ನಡುವೆ ಕಾರು ಸಿಲುಕಿದ್ದು, ಆ ಕಾರಿನಲ್ಲಿದ್ದ ಮಹಾರಾಷ್ಟ್ರದ ಪುಣೆಯ ತಾಯಿ ಹಾಗೂ ಮಗಳು ಸಾವನಪ್ಪಿದ್ದಾರೆ. ಪುಣೆಯ ಹಡಪ್ಸರ್‌ನ ತ್ರಿವೇಣಿನಗರದ ಶರ್ಮಿಳಾ ರಾಜನ್ ಕುಲ್ತೆ ಹಾಗೂ ಅವತು ತಮ್ಮ ಮಗಳು ಮೃಣ್ಮಯಿ ರಾಜನ್ ಕುಲ್ತೆ ಅವರ ಜೊತೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿದ್ದು, ಪ್ರವಾಸ ಮುಗಿಯುವ ಮುನ್ನವೇ ಅವರು ಪರಲೋಕಕ್ಕೆ ಪ್ರವೇಶಿಸಿದ್ದಾರೆ.
ಅವರಿಬ್ಬರು ಹೊಸಪೇಟೆಯಲ್ಲಿ ಆಲಂಬಾಷಾ ಅವರ ಕಾರು ಬಾಡಿಗೆಗೆಪಡೆದು ಈ ಪ್ರಯಾಣ ಮಾಡುತ್ತಿದ್ದರು. ಬಾದಾಮಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಗೋಕರ್ಣದ ಕಡೆ ಹೊರಟಿದ್ದರು. ಭಾನುವಾರ ರಾತ್ರಿ ಆ ಕಾರು ಯಲ್ಲಾಪುರ ಪ್ರವೇಶಿಸಿದ್ದು, ಅರಬೈಲ್ ಮಾರ್ಗವಾಗಿ ಸಾಗುತ್ತಿತ್ತು. ಆಗ, ಹಿಂದಿನಿoದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆಯಿತು. ಜೊತೆಗೆ ಆ ಲಾರಿ ಕಾರನ್ನು ಅನತಿ ದೂರದವರೆಗೆ ದೂಡಿಕೊಂಡು ಹೋಯಿತು. ಎದುರಿನಿಂದ ಬಂದ ಇನ್ನೊಂದು ಲಾರಿಗೆ ಕಾರು ಗುದ್ದಿದ್ದು, ಹಿಂದಿನ ಲಾರಿಯೂ ಇನ್ನಷ್ಟು ರಭಸವಾಗಿ ಡಿಕ್ಕಿ ಹೊಡೆಯಿತು.
ಎರಡು ಲಾರಿಗಳು ಅಪ್ಪಳಿಸಿದ ಪರಿಣಾಮ ಆ ಕಾರು ನಚ್ಚುನೂರಾಯಿತು. ಜೊತೆಗೆ ಸಮೀಪವಿದ್ದ ಮತ್ತೊಂದು ಕಾರಿಗೂ ಅಲ್ಪ ಪ್ರಮಾಣದ ಹಾನಿ ಸಂಭವಿಸಿತು. ಈ ದುರಂತದಲ್ಲಿ ತಾಯಿ ಮಗಳಿಬ್ಬರು ಕಾರಿನಲ್ಲಿಯೇ ಸಿಲುಕಿ ಸಾವನಪ್ಪಿದರು. ಕಾರಿನ ಚಾಲಕ ಆಲಂಬಾಷಾ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ರಕ್ತದ ಮಡುವಿನಲ್ಲಿ ಬಿದ್ದಿದ್ದವರನ್ನು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ತಾಯಿ-ಮಗಳ ಸಾವನ್ನು ವೈದ್ಯರು ದೃಢಪಡಿಸಿದರು.