ಶಿರಸಿ ಬಸ್ ನಿಲ್ದಾಣದಲ್ಲಿನ ಹೊಟೇಲಿನಲ್ಲಿ ಸಾಂಬಾರ್ ಸ್ವೀಕರಿಸಿದವರಿಗೆ ವಿಮಲ್ ಗುಟಕಾ ಪ್ಯಾಕೇಟ್ ಪ್ರೀ ಆಗಿ ದೊರೆಯುತ್ತಿದ್ದು, ಅಲ್ಲಿ ಈ ದಿನ ಅಧಿಕಾರಿಗಳು ಹೋಗಿ ತಪಾಸಣೆ ಮಾಡಿದ್ದಾರೆ. ಸಾಂಬಾರಿನೊಳಗೆ ಗುಟಕಾ ಚೀಟಿ ಸಿಕ್ಕ ಕಾರಣ ಹೊಟೇಲಿನವರಿಗೆ 1 ಸಾವಿರ ರೂ ದಂಡ ಹಾಕಿದ್ದಾರೆ. ನಿತ್ಯ ಲಕ್ಷಾಂತರ ರೂ ವ್ಯವಹಾರ ಮಾಡುವ ಹೊಟೇಲ್ ಮಾಲಕರು ಅಪರೂಪಕ್ಕೆ ಬಂದ ಅಧಿಕಾರಿಗಳಿಗೆ ಅತ್ಯಂತ ಖುಷಿಯಿಂದಲೇ 1 ಸಾವಿರ ರೂ ಕೊಟ್ಟು ಕಳುಹಿಸಿದ್ದಾರೆ.
ಶಿರಸಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಗುರುಪ್ರಸಾದ ಹೊಟೇಲ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಮೊದಲಿನಿಂದಲೂ ಗ್ರಾಹಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ. ಆ ಬಗ್ಗೆ ಸಾಕಷ್ಟು ದೂರುಗಳಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಹೊಟೇಲ್ ಮಾಲಕರು ಇನ್ನಷ್ಟು ಬೇಜವಬ್ದಾರಿಯಿಂದ ವರ್ತಿಸಿದ್ದು, ಸೋಮವಾರ ಗ್ರಾಹಕರೊಬ್ಬರಿಗೆ ಇಲ್ಲಿ ಸಾಂಬಾರಿನಲ್ಲಿ ವಿಮಲ್ ಗುಟ್ಕಾ ಚೀಟಿ ಸಿಕ್ಕಿತ್ತು.
ಆ ಬಗ್ಗೆ ಅರಿತ ನಗರಸಭೆಯವರು ಮಂಗಳವಾರ ಹೊಟೇಲ್ ಮೇಲೆ ದಾಳಿ ಮಾಡಿದರು. ಅಲ್ಲಿದ್ದ ವಿವಿಧ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಅಡುಗೆ ಮನೆಗೆ ನುಗ್ಗಿ ಅಲ್ಲಿನ ಶುಚಿತ್ವ ಗಮನಿಸಿದರು. ಕೊನೆಗೆ ಹೊಟೇಲ್ ನಡೆಸುವವರನ್ನು ಕರೆಯಿಸಿ ಮಾತನಾಡಿದರು. ಸ್ವಚ್ಚತೆ ಕಾಪಾಡುವಂತೆ ಬುದ್ದಿ ಹೇಳಿದರು. ಅಧಿಕಾರಿಗಳ ಮಾತಿಗೆ ಹೊಟೇಲಿನವರು ತಲೆಯಾಡಿಸಿದ್ದು, ನಂತರ 1 ಸಾವಿರ ರೂ ದಂಡ ಪಾವತಿಸಿದರು.