ಯುವಾ ಬಿಗ್ರೆಡ್ ಪ್ರಮುಖ ಅಣ್ಣಪ್ಪ ನಾಯ್ಕ ಅವರು ಕಳೆದ ಐದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸತ್ಯನಾರಾಯಣ ಕಥೆ ಮಾಡಿಸುತ್ತಿದ್ದಾರೆ. ಪ್ರತಿ ವರ್ಷ ಗಣೇಶ ಉತ್ಸವದ ಅವಧಿಯಲ್ಲಿ ಅವರು ಈ ಪೂಜೆ ಮಾಡಿಸುತ್ತಿದ್ದು, ಈ ವರ್ಷ ಗಣೇಶ ಉತ್ಸವದ ಅವಧಿಯಲ್ಲಿಯೇ ನರೇಂದ್ರ ಮೋದಿ ಅವರು 77ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕುಮಟಾ ಬಗ್ಗೋಣ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಈ ಸಲ 21ನೇ ವರ್ಷದ ಗಣೇಶ ಉತ್ಸವ ನಡೆಸುತ್ತಿದ್ದು, ಅತ್ಯಂತ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ. ಅಣ್ಣಪ್ಪ ನಾಯ್ಕ ಅವರು ಬಗ್ಗೋಣ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯಿಂದ ನಡೆಯುವ ಸಾರ್ವಜನಿಕ ಸತ್ಯನಾರಾಯಣ ಕಥೆಯಲ್ಲಿ ಭಾಗವಹಿಸಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಸತ್ಯನಾರಾಯಣ ಕಥೆ ಮಾಡಿಸುವಂತೆ ಕೋರಿದ್ದಾರೆ. ಅದರಂತೆ, ಈ ದಿನ ನಡೆದ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಸಂಕಲ್ಪ ಮಾಡಿ ಸತ್ಯನಾರಾಯಣ ಕಥೆ ನೆರವೇರಿಸಲಾಗಿದೆ.
ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನಲೆ ಅವರ ಅಭಿಮಾನಿಗಳು ಒಂದಿಲ್ಲೊAದು ಪುಣ್ಯಕಾರ್ಯ ಮಾಡುತ್ತಿದ್ದಾರೆ. ಬಿಜೆಪಿಗರು ವಿವಿಧ ಕಡೆ ಪೂಜೆ-ಪುನಸ್ಕಾರದಲ್ಲಿ ನಿರತರಾಗಿದ್ದಾರೆ. ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ್ಟ ಅನುಯಾಯಿ ಆಗಿರುವ ಅಣ್ಣಪ್ಪ ನಾಯ್ಕ ಅವರು ಮೋದಿ ಅವರ ಹೆಸರಿನಲ್ಲಿ ಸತ್ಯನಾರಾಯಣ ಕಥೆ ಮಾಡಿಸಿದ್ದಾರೆ. ಅಣ್ಣಪ್ಪ ನಾಯ್ಕ ಅವರು ಚಕ್ರವರ್ತಿ ಸೂಲಿಬೆಲೆ ಅವರ ಅಭಿಮಾನಿಯಾಗಿದ್ದು, ಈ ಮೊದಲು ಅವರ ಹೆಸರಿನಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಕುಮಟಾ ಬಗ್ಗೋಣ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ನರೇಂದ್ರ ದಾಮೋದರದಾಸ್ ಮೋದಿ ಎಂಬ ಹೆಸರಿನಲ್ಲಿಯೇ ಸತ್ಯನಾರಾಯಣ ಕಥೆಯ ರಸೀದಿ ತೆಗೆದಿದ್ದಾರೆ. ವೃಶ್ಚಿಕ ರಾಶಿ, ಅನುರಾಧ ನಕ್ಷತ್ರ ಎಂದು ರಸೀದಿಯಲ್ಲಿ ಬರೆದಿದ್ದಾರೆ. `ದೇಶಕ್ಕಾಗಿ ದಿನವಿಡೀ ದುಡಿಯುವ ಪ್ರಧಾನಿಗಳಿಗೆ ಒಳಿತು ಬಯಸಿ ಸತ್ಯನಾರಾಯಣ ಕಥೆ ಮಾಡಿಸಿದ್ದು, ಅವರಿಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ಅಣ್ಣಪ್ಪ ನಾಯ್ಕ ಅವರು ಹೇಳಿದ್ದಾರೆ. ಬಗ್ಗೋಣ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನಲೆ ದೀಪೋತ್ಸವವನ್ನು ನಡೆಸುತ್ತಿದ್ದಾರೆ.