ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಬಿಡುಗಡೆಯಾಗಿರುವ ಜುಲೈ ತಿಂಗಳ ಮೊತ್ತವನ್ನು ಎರಡು ದಿನಗಳ ಒಳಗೆ ಫಲಾನುಭವಿಗಳ ಖಾತೆಗೆ ಜಮೆ ಮಾಡುವಂತೆ ಉತ್ತರ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರ ಮಾತಿನ ಪ್ರಕಾರ ಅಧಿಕಾರಿಗಳು ನಡೆದುಕೊಂಡರೆ ದೀಪಾವಳಿ ಹಬ್ಬದ ಒಳಗೆ ಗೃಹಲಕ್ಷ್ಮೀಯರ ಖಾತೆಗೆ ಹಣ ಜಮಾ ಆಗಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಶೇ 99.96ರಷ್ಟು ಸಾಧನೆಯಾಗಿದೆ. ಬಾಕಿ ಉಳಿದಿರುವ ಮಹಿಳೆಯರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲು ಸತೀಶ ನಾಯ್ಕ ಅವರು ಪ್ರಯತ್ನಿಸುತ್ತಿದ್ದಾರೆ. ಯೋಜನೆಯ ನೋಂದಣಿಯಲ್ಲಿ ಕೆಲ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ಬಗೆಹರಿಸಲು ತಾಲೂಕುವಾರು ಅದಾಲತ್ ನಡೆಸಲು ಅವರು ಸೂಚಿಸಿದ್ದಾರೆ. ಆ ಮೂಲಕ `ಯಾವುದೇ ಫಲಾನುಭವಿ ಯೋಜನೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು’ ಎಂದವರು ಸೂಚಿಸಿದ್ದಾರೆ.
`ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯ ಸಾಧನೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದೆ. ಈ ಸಾಧನೆಗೆ ಗ್ಯಾರಂಟಿ ಪ್ರಾಧಿಕಾರದ ಎಲ್ಲಾ ತಾಲೂಕುಗಳು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳ ಪರಸ್ಪರ ಸಮನ್ವಯತೆ ಕಾರಣ’ ಎಂದು ಸತೀಶ ನಾಯ್ಕ ಅವರು ಹೇಳಿದ್ದಾರೆ. `ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲಿಲ್ಲ. ಭ್ರಷ್ಟಾಚಾರಕ್ಕೆ ಸಹ ಅವಕಾಶ ಇಲ್ಲ’ ಎಂದವರು ವಿವರಿಸಿದ್ದಾರೆ.
`ಶಕ್ತಿ ಯೋಜನೆಯ ಮೂಲಕ ಸಾರಿಗೆ ಇಲಾಖೆಗೆ ಆರ್ಥಿಕವಾಗಿ ಚೈತನ್ಯ ನೀಡಿದ್ದರೂ ಕೂಡಾ ಬಸ್‌ಗಳು ಆಗಾಗ್ಗೆ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ವಾಹನಗಳಿಗೆ ದುರಸ್ತಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸುವ ಜೊತೆಗೆ ಗ್ರಾಮೀಣ ಭಾಗದ ಸಂಚಾರದಲ್ಲಿ ಯಾವುದೇ ತೊಂದರೆಯಾಗದAತೆ ಗಮನ ಹರಿಸಬೇಕು’ ಎಂದವರು ಸಲಹೆ ನೀಡಿದ್ದಾರೆ. `ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಶೌಚಾಲಯಗಳ ವ್ಯವಸ್ಥೆ ಮತ್ತು ಬಸ್ ನಿಲ್ದಾಣದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಹೇಳಿದ್ದಾರೆ.
`ಯುವನಿಧಿ ಯೋಜನೆಯ ಮೂಲಕ ಈಗಾಗಲೇ ನೆರವು ಪಡೆಯುತ್ತಿರುವವರಿಗೆ ಕಡ್ಡಾಯವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಬೇಕು. ಜೊತೆಗೆ ತರಬೇತಿಯ ನಂತರ ಅವರಿಗೆ ಉದ್ಯೋಗ ದೊರಕಿಸಲು ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸೂಚಿಸಿದ್ದಾರೆ. `ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ಇದುವರೆಗೆ ಅನ್ನಭಾಗ್ಯ ಯೋಜನೆಯಡಿ 152.51 ಕೋಟಿ ರೂ, ಶಕ್ತಿ ಯೋಜನೆಯಡಿ 13.72 ಕೋಟಿ ಮಹಿಳೆಯರಿಗೆ 404.49 ಕೋಟಿ ರೂ, ಗೃಹಲಕ್ಷ್ಮೀ ಯೋಜನೆಯಡಿ 32,823 ಮಹಿಳೆಯರಿಗೆ 1299.20 ಕೋಟಿ ರೂ, ಯುವನಿಧಿ ಯೋಜನೆಯಡಿ 15.30 ಕೋಟಿ ರೂ, ಗೃಹ ಜ್ಯೋತಿ ಯೋಜನೆಯಡಿ 455.84 ಕೋಟಿ ರೂ ನೆರವು ಒದಗಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಜನಾರ್ಧನ ಕುಪ್ಪ ದೇವಾಡಿಗ, ನಾಗರಾಜ್ ಎಂ ಮುರ್ಡೇಶ್ವರ, ಸದಸ್ಯರಾದ ಪಾಂಡುರAಗ ಗೌಡ ಅಂಕೋಲಾ, ರಾಜೇಂದ್ರ ಎಚ್.ರಾಣೆ ಕಾರವಾರ, ದೇವಿದಾಸ ನಾಗೇಶ ಶಾನುಭಾಗ ಯಲ್ಲಾಪುರ, ಅಣ್ಣಪ್ಪ ಮಹಾಬಲೇಶ್ವರ ನಾಯ್ಕ ಮಂಕಿ, ರಾಜು ಮಂಜಪ್ಪ ನಾಯ್ಕ ಭಟ್ಕಳ, ಅಶೋಕ್ ಕೃಷ್ಣ ಗೌಡ ಕುಮಟಾ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ್ ನಾಯ್ಕ್, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತ್ ಕುಮಾರ್ ಹಬ್ಬು ಇದ್ದರು.