ಯಲ್ಲಾಪುರದ ಬಿಸಗೋಡು ರಸ್ತೆ ಮಾರ್ಗವಾಗಿ ಶ್ರೀಗಂಧ ಕದ್ದು ಸಾಗಿಸುತ್ತಿದ್ದ ನಾಲ್ವರು ಅರಣ್ಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಮಾಗೋಡಿನ ನಾಗೇಂದ್ರ ಸಿದ್ದಿ, ಕಮ್ಮಾಣಿಯ ರವಿ ಸಿದ್ದಿ, ಕಾಳಮ್ಮನಗರದ ಮಂಜುನಾಥ ಸಿದ್ದಿ ಹಾಗೂ ಲಕ್ಷಣ ಸಿದ್ದಿ ಜೈಲು ಸೇರಿದ್ದು, ವಜ್ರಳ್ಳಿಯ ಸತೀಶ್ ಸಿದ್ದಿ ಕಾಡಿನಲ್ಲಿ ಓಡಿ ಪರಾರಿಯಾಗಿದ್ದಾರೆ.
ಯಲ್ಲಾಪುರದ ಮಾಗೋಡಿನ ನಾಗೇಂದ್ರ ಮಂಜುನಾಥ ಸಿದ್ದಿ ಅವರು ಬೆಲೆಬಾಳುವ ಶ್ರೀಗಂಧದ ಮರಗಳ ಮೇಲೆ ಕಣ್ಣಿಟ್ಟಿದ್ದರು. ಅವರು ತಮ್ಮ ಸಹಚರರಾದ ಅಂಕೋಲಾ ಕಮ್ಮಾಣಿಯ ರವಿ ಕೃಷ್ಣ ಸಿದ್ದಿ, ಯಲ್ಲಾಪುರ ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ದಿ, ಲಕ್ಷಣ ಪ್ರಭಾಕರ ಸಿದ್ದಿ ಹಾಗೂ ವಜ್ರಳ್ಳಿಯ ಸತೀಶ್ ಸಿದ್ದಿ ಅವರ ಜೊತೆ ಸೇರಿ ಶ್ರೀಗಂಧದ ಮರ ಕದಿಯುವ ಯೋಜನೆ ರೂಪಿಸಿದ್ದರು. ಅವರೆಲ್ಲರೂ ಆಗಾಗ ಮರ ಕಟಾವು ಮಾಡಿ, ಅದನ್ನು ಮಾರುವುದನ್ನು ರೂಡಿಸಿಕೊಂಡಿದ್ದು ಅದೇ ಕೆಲಸವನ್ನು ಈ ಬಾರಿಯೂ ಮುಂದುವರೆಸಿದ್ದರು. ಅದರಂತೆ, ಅವರೆಲ್ಲರೂ ಸೇರಿ ಶ್ರೀಗಂಧದ ಮರ ಕಟಾವು ಮಾಡಿದ್ದು, ಸೆಪ್ಟೆಂಬರ್ 23ರಂದು ಅದನ್ನು ಯಲ್ಲಾಪುರ ಬಿಸಗೋಡು ಮಾರ್ಗದ ಸ್ಮಶಾನ ಪಕ್ಕದಿಂದ ಸಾಗಿಸುವ ಕೆಲಸ ಶುರು ಮಾಡಿದ್ದರು. ಶ್ರೀಗಂಧದ ಮರದ ತುಂಡುಗಳನ್ನು ಅವರು ಬೈಕಿನಲ್ಲಿ ಸಾಗಿಸುವ ಸಾಹಸ ಮಾಡಿದ ಬಗ್ಗೆ ಅಲ್ಲಿನವರೇ ಒಬ್ಬರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಉಪಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ಸೂಚನೆ ಮೇರೆಗೆ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ ಅವರು ಸ್ಥಳಕ್ಕೆ ದೌಡಾಯಿಸಿದರು. ಉಪವಲಯ ಅರಣ್ಯಾಧಿಕಾರಿ ದರ್ಶನ ವಿ ಎಸ್, ಜಿ ಸಂತೋಷ, ಶ್ರೀನಿವಾಸ ನಾಯ್ಕ, ಸಂಜಯಕುಮಾರ ಬೋರಗಲ್ಲಿ, ಪ್ರಭಾಕರ ಬಗಲಿ, ಮಂಜುನಾಥ ಗರ್ಭಗುಡಿ, ಶರಣಬಸು ದೇವರ, ಶ್ರೀಧರ ಸಜ್ಜನ, ಉಮೇಶ ಹೊಸಮನಿ ಸೇರಿ ಅಲ್ಲಿದ್ದ ಎಲ್ಲರನ್ನು ಹಿಡಿಯುವ ಪ್ರಯತ್ನ ಮಾಡಿದರು. ಗಸ್ತು ಅರಣ್ಯ ಪಾಲಕರಾದ ಶಹನವಾಜ್ ಮುಲ್ತಾನಿ, ಗೌಡಪ್ಪ ಗೌಡ ಸುಳ್ಳದ, ರಮೇಶ ಬಡಿಗೇರ, ಬಸವರೆಡ್ಡಿ ರಡ್ಡೇರ, ಸತೀಶ ಕುಂಬಾರ, ಗೌರೀಶ ನಾಯ್ಕ, ರಾಮು ಕೊಕರೆ, ಶಿವಾನಂದ ಯಾವಗಲ್, ಗಣೇಶ ಅವರ ಜೊತೆ ವಾಹನ ಚಾಲಕಆನಂದ, ದಿನೇಶ, ಪ್ರಶಾಂತ ಅವರು ಸೇರಿ ನಾಲ್ವರನ್ನು ಹಿಡಿದರು. ವಜ್ರಳ್ಳಿಯ ಸತೀಶ್ ಸಿದ್ದಿ ಮಾತ್ರ ಅವರಿಂದ ತಪ್ಪಿಸಿಕೊಂಡು ಓಡಿ ಪರಾರಿಯಾದರು.
ಬಂಧಿತರ ಬಳಿ 3.80 ಕೆಜಿಯ 12 ತುಂಡು ಸಿಪ್ಪೆ ಕೆತ್ತಿದ ಶ್ರೀಗಂಧ, 5ಕೆಜಿಯಿರುವ 17 ಸಿಪ್ಪೆಸಹಿತದ ತುಂಡು ಸಿಕ್ಕಿತು. ಅದನ್ನು ಸಾಗಿಸಲು ಬಳಸಿದ ಬೈಕನ್ನು ಅರಣ್ಯ ಸಿಬ್ಬಂದಿ ಜಪ್ತು ಮಾಡಿದರು. ಸಿಕ್ಕಿಬಿದ್ದ ನಾಲ್ವರನ್ನು ಜೈಲಿಗೆ ಕಳುಹಿಸಿ, ಓಡಿದ ಸತೀಶ್ ಸಿದ್ದಿ ಅವರಿಗಾಗಿ ಶೋಧ ಶುರು ಮಾಡಿದರು.