ಮುಂಡಗೋಡದಿoದ ನಾಪತ್ತೆಯಾಗಿದ್ದ ಯುವಕ-ಯುವತಿ ಮದುವೆಯಾಗಿ ಮರಳಿದ್ದು, ಅವರ ಕುಟುಂಬ ಕಲಹಕ್ಕೆ ಕಾರಣವಾಗಿದೆ. ಯುವಕ ಹಾಗೂ ಯುವತಿ ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮಂಗಳವಾರ ರಾತ್ರಿ ಆ ನವ ದಂಪತಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಇದನ್ನು ಅರಿತ ಅವರ ಪೋಷಕರು ಅಲ್ಲಿ ದೌಡಾಯಿಸಿದ್ದಾರೆ. ಆಗ, `ನಾವಿಬ್ಬರೂ ಕಾನೂನು ಪ್ರಕಾರ ವಿವಾಹವಾಗಿದ್ದೇವೆ. ನಮ್ಮನ್ನು ಬದುಕಲಿ ಬಿಡಿ’ ಎಂದು ಆ ಯುವ ದಂಪತಿ ಮನವಿ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಅವರಿಬ್ಬರು ಕಾಣೆಯಾಗಿದ್ದು, ಎಲ್ಲಡೆ ಹುಡುಕಾಟ ನಡೆಸಿದ್ದ ಪಾಲಕರು ಈ ವಿವಾಹ ಹೇಳಿಕೆ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ.
ಯುವಕ ಹಾಗೂ ಯುವತಿ ಕಾಣೆಯಾದ ಬಗ್ಗೆ ದೂರು ಆಲಿಸಿದ್ದ ಪೊಲೀಸರು ಒಂದು ತಿಂಗಳಿನಿAದ ಹುಡುಕಾಟ ನಡೆಸಿದ್ದು, ಎಲ್ಲಿಯೂ ಅವರ ಸುಳಿವು ಸಿಕ್ಕಿರಲಿಲ್ಲ. ಪೊಲೀಸರ ಶೋಧ ಕಾರ್ಯಾಚರಣೆ ಬಗ್ಗೆ ಅರಿತ ಪ್ರೇಮಿಗಳು ಮಂಗಳವಾರ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದರಿಂದ ಪೊಲೀಸರು ಕ್ಷಣಕಾಲ ಗೊಂದಲಕ್ಕೆ ಒಳಗಾದರು. ಯುವಕ ಹಾಗೂ ಯುವತಿ ಠಾಣೆಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳ ಪೋಷಕರು ಠಾಣೆಯ ಬಳಿ ಜಮಾಯಿಸಿದ್ದರು. ಈ ವೇಳೆ ಅವರಿಬ್ಬರು ಈಗಾಗಲೇ ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ವಿಚಾರ ತಿಳಿದು ಆಕ್ರೋಶಗೊಂಡ ಪೋಷಕರ ನಡುವೆ ತೀವ್ರ ವಾಗ್ವಾದ ಶುರು ಮಾಡಿದರು.
ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪೊಲೀಸ್ ಠಾಣೆಯ ಆವರಣದಲ್ಲಿಯೇ ಎರಡೂ ಕಡೆಯ ಪೋಷಕರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಪರಸ್ಪರ ತಳ್ಳಾಟ, ನುಕಾಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ನೋಡಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದರು. ಎರಡು ಕಡೆಯವರ ಜಗಳ ನೋಡಿದ ಜನರು ಆ ಜಗಳ ಬಿಡಿಸುವ ಪ್ರಯತ್ನ ಮಾಡಿದರು. ಹರಸಾಹಸದ ನಂತರ ಪರಿಸ್ಥಿತಿ ಸರಿಯಾಯಿತು. ಅದಾಗಿಯೂ, ತೀವ್ರ ಆಕ್ರೋಶಗೊಂಡಿದ್ದ ಪೋಷಕರು ಮತ್ತೆ ಮತ್ತೆ ಜಗಳ ಮುಂದುವರಿಸಲು ಯತ್ನಿಸಿದ್ದು, ಕೊನೆಗೆ ಪೊಲೀಸರು ಹಾಗೂ ಗ್ರಾಮಸ್ಥರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.