ಕಾರವಾರದ ಕದ್ರಾ-ಮಲ್ಲಾಪುರ ಮಾರ್ಗದಲ್ಲಿನ ಬಸ್ ಸಂಚಾರ ಅವ್ಯವಸ್ಥೆ ವಿರುದ್ಧ ಬುಧವಾರ ಪ್ರಯಾಣಿಕರು ದಿಢೀರ್ ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಹೊರಹಾಕಿದ್ದಾರೆ. ಈ ವೇಳೆ ಕೆಲ ಬಸ್ಸುಗಳ ಸಂಚಾರವನ್ನು ತಡೆದು ಬಿಸಿ ಮುಟ್ಟಿಸಿದ್ದಾರೆ.
ಕೆಲ ದಿನಗಳಿಂದ ಕದ್ರಾ-ಮಲ್ಲಾಪುರ ಮಾರ್ಗದ ಬಸ್ಸುಗಳ ಸಂಚಾರ ಸರಿಯಾಗಿಲ್ಲ. ಅದರಲ್ಲಿಯೂ ಸಂಜೆ ವೇಳೆ ಬಸ್ಸುಗಳು ಇರುವುದೇ ಇಲ್ಲ. ಇದರಿಂದ ಅನೇಕ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದು, ಘಟಕ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆ ಪ್ರಯಾಣಿಕರು ಇನ್ನಿತರ ಬಸ್ಸುಗಳ ಓಡಾಟಕ್ಕೂ ತಡೆ ಒಡ್ಡಿ ಪ್ರತಿಭಟನೆ ಮಾಡಿದ್ದಾರೆ.
ಬುಧವಾರ ಮಧ್ಯಾಹ್ನದಿಂದ ಈ ಮಾರ್ಗದಲ್ಲಿ ಮೂರು ಬಸ್ ಸಂಚಾರಿಸಬೇಕಿದ್ದು, ಒಂದು ಬಸ್ ಸಹ ಸರಿಯಾದ ಸಮಯಕ್ಕೆ ಸಂಚರಿಸಿಲ್ಲ. ಅದರಿಂದ ಪ್ರಯಾಣಿಕರ ಆಕ್ರೋಶ ಹೆಚ್ಚಾಯಿತು. ಬಸ್ ನಿಲ್ದಾಣದಲ್ಲಿ ಕಾದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯರು ಏಕಾಏಕಿ ಧರಣಿ ಶುರು ಮಾಡಿದರು. ಬಸ್ ವ್ಯವಸ್ಥೆ ಸರಿಪಡಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪ್ರಯಾಣಿಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕದ್ರಾ-ಮಲ್ಲಾಪುರ ಮಾರ್ಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರು. ಮತ್ತೆ ಹೀಗೆ ಆದರೆ, ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.