ಮುಂಡಗೋಡಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಅತ್ಯಂತ ಕಳಪೆ ಗುಣಮಟ್ಟದ ಬೂಟುಗಳನ್ನು ನೀಡಿದೆ. ಈ ಹಿನ್ನಲೆ ಮಕ್ಕಳೆಲ್ಲರೂ ಸೇರಿ ಆ ಬೂಟುಗಳನ್ನು ಅಂಗಳಕ್ಕೆ ಎಸೆದು ಆಕ್ರೋಶವ್ಯಕ್ತಪಡಿಸಿದ್ದಾರೆ.
`ಸರ್ಕಾರದ ವತಿಯಿಂದ ಮಕ್ಕಳಿಗೆ ಉಚಿತವಾಗಿ ನೀಡಲಾಗಿರುವ ಪಾದರಕ್ಷೆಗಳು ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿಲ್ಲ. ಪಾದರಕ್ಷೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ’ ಎಂದು ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಪಾದರಕ್ಷೆಗಳನ್ನು ಧರಿಸದೇ ತಿರಸ್ಕರಿಸಿದ್ದಾರೆ. ಶಾಲೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು-ಪೋಷಕರು ಈ ಕುರಿತು ಚರ್ಚಿಸಿ `ಮಕ್ಕಳಿಗೆ ಗುಣಮಟ್ಟದ ಪಾದರಕ್ಷೆಗಳನ್ನು ಒದಗಿಸಬೇಕು’ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. `ಸರ್ಕಾರ ಮಕ್ಕಳಿಗಾಗಿ ಒದಗಿಸುವ ಸೌಲಭ್ಯಗಳು ಸಮರ್ಪಕ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ವಿತರಿಸುವುದರಿಂದ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.
`ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಾದರಕ್ಷೆಗಳ ಗುಣಮಟ್ಟ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ವಿತರಿಸಿರುವ ಪಾದರಕ್ಷೆಗಳನ್ನು ಹಿಂಪಡೆದು, ಗುಣಮಟ್ಟದ ಪಾದರಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು’ ಎಂದು ಆಗ್ರಹಿಸಿದರು. `ಪಾದರಕ್ಷೆಗಳ ಗುಣಮಟ್ಟದ ಕುರಿತು ಅಗತ್ಯ ದಾಖಲೆ ಹಾಗೂ ಮಾಹಿತಿಯೊಂದಿಗೆ ಲೋಕಾಯುಕ್ತರಿಗೂ ದೂರು ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಎಸ್‌ಡಿಎಂಸಿ ಹಾಗೂ ಪಾಲಕರು ತಿಳಿಸಿದ್ದಾರೆ.