ಗೋಕರ್ಣಕ್ಕೆ ಬಂದಿದ್ದ ಭಕ್ತ ದಂಪತಿಗೆ ಮೋಡಿ ಮಾಡಿದ ಐವರು ನಾಗಾಸಾಧುಗಳು ಅವರ ಬಳಿಯಿದ್ದ ಚಿನ್ನಾಭರಣ ಅಪಹರಿಸಿದ್ದಾರೆ. `ಸಮಸ್ಯೆ ಬಗೆಹರಿಸುವೆ’ ಎಂದು ನಂಬಿಸಿ ಚಿನ್ನ ಎಗರಿಸಿದ್ದ ನಾಗಾಸಾಧುಗಳ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಇಲ್ಲಿನ ವೈದಿಕರ ಮನೆಗೆ ಬಂದಿದ್ದ ತೆಲಂಗಾಣದ ಭಕ್ತರಿಗೆ ನಾಗಾಸಾಧುಗಳು ಎದುರಾಗಿದ್ದರು. `ನಿಮಗೆ ಗಂಡಾoತರವಿದೆ’ ಎಂದು ಹೆದರಿಸಿದ ನಾಗಾಸಾಧುಗಳು ಆ ಭಕ್ತರ ಬಳಿಯಿದ್ದ ಚಿನ್ನಾಭರಣ ಎಗರಿಸಿದ್ದರು. ಚಿನ್ನ ಕಳೆದುಕೊಂಡ ಮನೋಹರ ಕುಲಕರ್ಣಿ ಅವರು ಈ ಬಗ್ಗೆ ಸ್ಥಳೀಯರಲ್ಲಿ ಹೇಳಿದ್ದು, ಅವರ ಸಹಾಯದಿಂದ ಪೊಲೀಸರು ಚಿನ್ನ ಕದ್ದ ಸಾಧುಗಳನ್ನು ಹುಡುಕಿದರು. 8 ಲಕ್ಷ ರೂ ಮೌಲ್ಯದ ಆಭರಣವನ್ನು ಜಪ್ತು ಮಾಡಿ ನೊಂದ ದಂಪತಿಗೆ ಅದನ್ನು ಮರಳಿಸಿದರು.
ಮನೋಹರ ಕುಲಕರ್ಣಿ ದಂಪತಿ ಈಗಾಗಲೇ ಸಾಕಷ್ಟು ನೊಂದಿದ್ದರು. ಅವರನ್ನು ಭಾವನಾತ್ಮಕ ಬಂಧನದಲ್ಲಿರಿಸಿದ ನಾಗಾಸಾಧುಗಳು ಮೋಡಿ ಮಾಡಿ ಅವರ ಚಿನ್ನ ಎಗರಿಸಿದ್ದರು. ಮಹಾಗಣಪತಿ, ಮಹಾಬಲೇಶ್ವರ ದೇವರ ದರ್ಶನಕ್ಕೆ ಬಂದ ದಂಪತಿ ದರ್ಶನ ಮುಗಿಸಿ ವೈದಿಕರ ಮನೆಗೆ ಹೋದಾಗ ಈ ವಿಷಯ ವಿವರಿಸಿದರು. ಮಾನಸಿಕ ಕುಗ್ಗಿದ್ದರಿಂದ ತಕ್ಷಣ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆ ಮತ್ತು ಉಂಗುರ ತೆಗೆದುಕೊಟ್ಟ ವಿಧಾನದ ಬಗ್ಗೆ ತಿಳಿಸಿದರು. ನಾಗಾಸಾಧುಗಳು ಭಯ ಹುಟ್ಟಿಸಿದ್ದರಿಂದ ಈ ರೀತಿ ಮಾಡಿದ್ದಾಗಿ ಅವರು ಹೇಳಿದ್ದು, ಈ ವಿಷಯ ಪೊಲೀಸರಿಗೆ ಗೊತ್ತಾಯಿತು. ಮಹಾಬಲೇಶ್ವರ ಮಂದಿರದ ಹೊರ ಠಾಣೆಯ ಹವಲ್ದಾರ ಜಟ್ಟಪ್ಪ ನಾಯ್ಕ ಅವರ ವಿಶೇಷ ಮುತುವರ್ಜಿಯಿಂದ ನಾಗಾಸಾಧುಗಳು ಸಿಕ್ಕಿಬಿದ್ದರು.
ಪಿಐ ಶ್ರೀಧರ ಎಸ್ ಆರ್ ಹಾಗೂ ಪಿಸೈ ಅನಿಲ ಅವರ ಜೊತೆ ಸುನಿಲ, ಎಸೈ ನಿರಂಜನ ನಾಯಕ, ಹವಾಲ್ದಾರ ರಾಜೇಶ ನಾಯ್ಕ, ವಸಂತ ನಾಯ್ಕ, ಸಿಬ್ಬಂದಿ ಪ್ರಕಾಶ, ಕಿರಣ, ಶ್ರೀಕಾಂತ , ಪರಮೇಶ್ವರ ಬೆಂಡ್ಲಗಟ್ಟಿ, ಮಣಿಕಂಠ ಗೌಡ ಸೇರಿ ಉಡುಪಿಯವರೆಗೆ ಹೋಗಿದ್ದ ನಾಗಾಸಾಧುಗಳನ್ನು ಹಿಡಿದುತಂದರು. ಯಾತ್ರಿಕರ ಚಿನ್ನ ಕದ್ದ ಅವರಿಂದಲೇ ಅದನ್ನು ಭಕ್ತರಿಗೆ ಮರಳಿಸಿದರು.