ಕಾರವಾರದ ಬಿಣಗಾದಲ್ಲಿರುವ ಜಾಕೀರ್ ಹುಸೇನ್ ಗುಡಿಮಿಯಾ ಎಂಬಾತರು ಹಿಂದೂ ಧರ್ಮದವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಆ ವಿಡಿಯೋವನ್ನು ಅವರು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕಾರವಾರದ ಬಿಣಗಾದಲ್ಲಿ ಜಾಕೀರ್ ಹುಸೇನ್ ಗುಡಿಮಿಯಾ ಅವರು ವಾಸವಾಗಿದ್ದಾರೆ. ಮತ್ತೊಬ್ಬರ ಜೊತೆ ಸೇರಿ ಅವರು ರೀಲ್ಸ್ ಮಾಡಿದ್ದು, ಅದರಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ. ಅತ್ಯಂತ ಕೆಟ್ಟ ಶಬ್ದಗಳನ್ನು ಬಳಸಿ ಹಿಂದೂ ಹಾಗೂ ಮುಸ್ಲೀಂ ಸಮುದಾಯದ ನಡುವೆ ದ್ವೇಷ ಮೂಡುವ ರೀತಿ ಅವರು ಭಾಷಣ ಮಾಡಿದ್ದಾರೆ. ವಿಡಿಯೋದಲ್ಲಿ ಹಿಂದೂ ಸಮುದಾಯದವರ ಜೊತೆ ಅವರು ಭಜರಂಗದಳದವರನ್ನು ನಿಂದಿಸಿದ್ದಾರೆ. ಅವರ ಈ ಮಾತುಗಳು ಕೊಂಕಣಿ ಭಾಷೆಯಲ್ಲಿವೆ.
ಅಮೀನ್ ನಾಯ್ಕ ಎಂಬಾತರಿಗೆ ಈ ವಿಡಿಯೋ ಇನಸ್ಟಾಗ್ರಾಂ ಮೂಲಕ ಟ್ಯಾಗ್ ಆಗಿದೆ. ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಅಡ್ಡಿ ಬರುವ ಹಾಗೇ ಇದ್ದ ಆ ವಿಡಿಯೋವನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸ್ ಸಿಬ್ಬಂದಿ ಉಲ್ಲಾಸ ತೋಕು ನಾಯ್ಕ ಅವರು ನೋಡಿದ್ದಾರೆ. ಕೊಂಕಣಿ ಅರಿತಿರುವ ಉಲ್ಲಾಸ ನಾಯ್ಕ ಅವರು ಇಡೀ ವಿಡಿಯೋ ನೋಡಿದಾಗ ಅದರಲ್ಲಿ ಹಿಂದೂ ಹಾಗೂ ಮುಸ್ಲೀಂ ಸಮುದಾಯದ ನಡುವೆ ದ್ವೇಷ ಹುಟ್ಟಿಸುವ ಉದ್ದೇಶ ಹಾಗೂ ಒಂದು ಧರ್ಮದ ವಿರುದ್ಧ ಅವಹೇಳನ ಮಾಡಿ ಧಾರ್ಮಿಕ ಭಾವನೆಗೆ ಅಡ್ಡಿಪಡಿಸುವ ದುರುದ್ದೇಶ ಹೊಂದಿರುವುದು ಅರಿವಾಗಿದೆ.
ಸೆಪ್ಟೆಂಬರ್ 22ರ ಸಂಜೆ 6 ಗಂಟೆಗೆ ಆ ವಿಡಿಯೋ ಉಲ್ಲಾಸ ನಾಯ್ಕ ಅವರು ಗಮನಿಸಿದ್ದು, ತಕ್ಷಣ ಮೇಲಧಿಕಾರಿಗಳಿಗೆ ಹೇಳಿದ್ದಾರೆ. ಅವರ ಸೂಚನೆ ಮೇರೆಗೆ ಜಾಕೀರ್ ಹುಸೇನ್ ಗುಡಿಮಿಯಾ ಹಾಗೂ ಅಪರಿಚಿತ ವ್ಯಕ್ತಿ ವಿರುದ್ಧ ಕೇಸು ಮಾಡಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದ್ದು, ಆರೋಪಿತರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.