ನೊoದವರಿಗೆ ನೆರವು ನೀಡುವುದರ ಜೊತೆ ವಿವಿಧ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು `ಅನಂತ ಜನ ಸ್ಪಂದನ ಕೇಂದ್ರ’ ಶುರು ಮಾಡಿದ್ದಾರೆ. ಸದ್ಯ ಸಿದ್ದಾಪುರದಲ್ಲಿ ಈ ಕೇಂದ್ರಕ್ಕೆ ಚಾಲನೆ ಸಿಕ್ಕಿದ್ದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧವಿರುವುದಾಗಿ ಅವರು ಘೋಷಿಸಿದ್ದಾರೆ.
`ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳ ಲಾಭ ಪಡೆಯಲು ಜನರಿಗೆ ಮಾಹಿತಿ ಕೊರತೆ ಎದುರಾಗುತ್ತಿದೆ. ಅರ್ಜಿ ಬರೆಯುವ ವಿಧಾನದಿಂದ ಹಿಡಿದು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳವರೆಗೆ ಎಲ್ಲಾ ಹಂತದಲ್ಲಿಯೂ ಮಾಹಿತಿ ನೀಡಿ ಸಹಾಯ ಮಾಡಲು ಈ ಕೇಂದ್ರ ಶುರು ಮಾಡಲಾಗಿದೆ’ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಕಚೇರಿಯಿಂದ ಕಚೇರಿಗೆ ಅಲೆದಾಟ, ನಾಳೆ ಬನ್ನಿ ಎಂಬ ಉತ್ತರದಿಂದ ಸಮಸ್ಯೆ ಅನುಭವಿಸಿದವರಿಗೆ ಈ ಕೇಂದ್ರ ನೆರವಾಗಲಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಸರಿಯಾದ ಮಾಹಿತಿ, ಅಗತ್ಯ ದಾಖಲೆ ಹಾಗೂ ಅರ್ಜಿ ಸಲ್ಲಿಕೆಯ ನೆರವು ಒದಗಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ’ ಎಂದವರು ತಿಳಿಸಿದ್ದಾರೆ.
`ವ್ಯಕ್ತಿಯ ವೈಯಕ್ತಿಕ ಸಮಸ್ಯೆ ಜೊತೆ ಊರು, ಗ್ರಾಮ ಹಾಗೂ ಸಾಮೂಹಿಕ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಜನಪರ ಯೋಜನೆಗಳ ಮಾಹಿತಿ ತಲುಪಿಸುವಿಕೆ, ಆ ಯೋಜನೆಗೆ ಅಗತ್ಯವಿರುವ ದಾಖಲೆ ಸಿದ್ಧಪಡಿಸುವಿಕೆ, ದೂರದ ಊರುಗಳಿಂದ ಬಂದವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಈ ಕೇಂದ್ರದ ಜವಾಬ್ದಾರಿ’ ಎಂದಿದ್ದಾರೆ. `ಕೆಲವರು ಕೆಲಸ ತ್ವರಿತವಾಗಿ ಆಗಬೇಕೆಂಬ ಆತುರದಲ್ಲಿ ಮಧ್ಯವರ್ತಿಗಳ ಮೊರೆ ಹೋಗಿ ಹೆಚ್ಚಿನ ಹಣ ನೀಡಿ ಮೋಸ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಲು ಈ ಕೇಂದ್ರ ತೆರೆಯಲಾಗಿದೆ. ಇದು ಪಕ್ಷಾತೀತವಾಗಿ ಕಾರ್ಯ ಮಾಡಲಿದೆ’ ಎಂದರು. `ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ಮುದ್ರಣ, ಉದ್ಯಮ ನೋಂದಣಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಪ್ರಿಂಟ್, ಇ-ಶ್ರಮ ಕಾರ್ಡ್, ವಿದ್ಯಾರ್ಥಿ ಬಸ್ ಪಾಸ್, ಸಂಧ್ಯಾ ಸುರಕ್ಷಾ ಯೋಜನೆ, ಪಿಎಂ ಕಿಸಾನ್, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಹಾಸ್ಟೆಲ್ ಹಾಗೂ ಕಾಲೇಜು ಅರ್ಜಿ ಸೇರಿದಂತೆ ಹಲವು ಸೇವೆಗಳು ಲಭ್ಯವಿದ್ದು, ಇವುಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ’ ಎಂದು ಘೋಷಿಸಿದರು. `ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರ, ಅಂಗವಿಕಲರ ವೇತನ, ಪಾನ್ ಕಾರ್ಡ್ ತಿದ್ದುಪಡಿ ಸೇರಿದಂತೆ ಸರ್ಕಾರದ ನಿಗದಿತ ಶುಲ್ಕಕ್ಕೆ ಒಳಪಡುವ ಹಲವು ಸೇವೆಗಳಿಗೂ ಮಾರ್ಗದರ್ಶನ ನೀಡಲಾಗುವುದು. ಸಾರ್ವಜನಿಕರಿಂದ ಸೇವಾ ಶುಲ್ಕ ಪಡೆಯದೆ ನೆರವು ನೀಡುವುದು ಕೇಂದ್ರದ ವಿಶೇಷತೆ’ ಎಂದರು. ತಿಮ್ಮಪ್ಪ, ಪ್ರದೀಪ ಹೆಗಡೆ ಕರ್ಜಗಿ, ಅಣ್ಣಪ್ಪ ಹಸಲರ್ ಶಾನ್ ಬಾಳೆಗದ್ದೆ ಇದ್ದರು.