`ಎಲ್ಲಾ ರೋಗಗಳಿಗಿಂತಲೂ ಬಡತನ ದೊಡ್ಡ ರೋಗ. ಯಾವ ಖಾಯಿಲೆ ಬಂದರೂ ಅನುಭವಿಸಬಹುದಾಗಿದ್ದು, ಬಡತನ ಎಂಬ ಖಾಯಿಲೆ ಮಾತ್ರ ಅನುಭವಿಸುವುದು ಅತ್ಯಂತ ಕಷ್ಟ’ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. ಬಡತನ ನಿರ್ಮೂಲನೆಗಾಗಿ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ನಡೆಸಿರುವುದಾಗಿಯೂ ಅವರು ವಿವರಿಸಿದ್ದಾರೆ.
ಸಿದ್ದಾಪುರದ ಹೇರೂರಿನಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿದ ಅವರು `ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಹೊಲಿಗೆ ಕಲಿಕೆಯು ಉತ್ತಮ ದಾರಿಯಾಗಿದೆ. ಇದನ್ನು ಕಲಿತ ಮಹಿಳೆಯರು ಬಡತನದಿಂದ ಹೊರಬಂದು ಸ್ವಾವಲಂಬಿಯಾಗಿ ಬದುಕಬೇಕು’ ಎಂದವರು ಮನವಿ ಮಾಡಿದ್ದಾರೆ. `ಅಡುಗೆ ಮತ್ತು ಹೊಲಿಗೆ ಇವೆರಡು ಸ್ವಾವಲಂಬಿಯಾಗಿ ಬದುಕಲು ಉತ್ತಮ ದಾರಿಯಾಗಿದೆ. ಉಚಿತ ಹೊಲಿಗೆ ತರಬೇತಿಯಲ್ಲಿ ನುರಿತ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಹೊಲಿಗೆಯನ್ನು ಸರಿಯಾಗಿ ಕಲಿತರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ’ ಎಂದವರು ಹೇಳಿದ್ದಾರೆ.
`ಹೊಲಿಗೆ ಕಲಿಯುವುದರಿಂದ ಸಾಕಷ್ಟು ಉಪಯೋಗವಿದೆ. ಒಂದು ತಿಂಗಳುಗಳ ಕಾಲ ನಡೆಯಲಿರುವ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಹೊಲಿಗೆ ಯನ್ನು ಕಲಿತುಕೊಳ್ಳಬೇಕು’ ಎಂದು ಗಣೇಶ ಹೇರೂರು ಅವರು ಹೇಳಿದ್ದಾರೆ. ಪ್ರಮುಖರಾದ ನರಹರಿ ಅವರು ಮಾತನಾಡಿ `ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ನಮ್ಮದಾಗುತ್ತದೆ. ಅನಂತಮೂರ್ತಿ ಹೆಗಡೆ ಅವರು ಬಹಳ ಕಷ್ಟದಿಂದ ಬಡತನವನ್ನು ಅನುಭವಿಸಿದ್ದು, ಇದೀಗ ಬಡತನ ನಿವಾರಣೆಗೆ ಶಿಬಿರ ಆಯೋಜಿಸಿದ್ದಾರೆ’ ಎಂದರು. ಅಣ್ಣಪ್ಪ ಗೌಡ, ಕಮಲಾಕರ ನಾಯ್ಕ, ಸೀತಾರಾಮ ಗೌಡ, ಬಾಲಚಂದ್ರ ಹೆಗಡೆ, ವಿಶ್ವನಾಥ ಹೆಗಡೆ, ಪ್ರದೀಪ ಹೆಗಡೆ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ನಾಗರತ್ನ ಗೌಡ ಇದ್ದರು.