ತಂದೆಗೆ ಆವರಿಸಿದ ಕಾನ್ಸರ್ ರೋಗದ ಬಗ್ಗೆ ಚಿಂತೆಯಲ್ಲಿದ್ದ ಶಿರಸಿಯ ನಂದಿನಿ ಅವರಿಗೆ ಮತ್ತೊಂದು ಆಘಾತವಾಗಿದೆ. ತಂದೆಯ ಆರೋಗ್ಯ ವಿಚಾರಿಸಿಕೊಂಡು ಬರುತ್ತಿರುವಾಗ ಕಪ್ಪು ಬಣ್ಣದ ಕಾರೊಂದು ನಂದಿನಿ ಅವರ ಬಾವ ರಾಜು ಪೂಜಾರಿ ಅವರಿಗೆ ಡಿಕ್ಕಿ ಹೊಡೆದಿದೆ.
ಶಿರಸಿಯ ಸರಕುಳಿ ಬಳಿಯ ತಟ್ಟಿಕೈ ಊರಿನಲ್ಲಿ ನಂದಿನಿ ಅಂಬಿಗ ಅವರು ವಾಸವಾಗಿದ್ದಾರೆ. ನಂದಿನಿ ಅವರ ತಂದೆ ಚಂದ್ರು ಅಂಬಿಗ ಅವರಿಗೆ ಕಾನ್ಸರ್ ಕಾಣಿಸಿದ ಕಾರಣ ಅವರು ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಂದ್ರು ಅಂಬಿಗ ಅವರ ಚಿಕಿತ್ಸೆ ನಡೆಯುತ್ತಿದೆ. ಹೀಗಿರುವಾಗ ನಂದಿನಿ ಅಂಬಿಗ ಅವರು ಒಣಿಕೇರಿ ಬೆಂಗಳೆಯ ಆಚಾರಿ ಕೆಲಸ ಮಾಡುವ ತಮ್ಮ ಬಾವ ರಾಜು ಪೂಜಾರಿ ಅವರ ಜೊತೆ ಬೆಂಗಳೂರಿಗೆ ಹೋಗಿದ್ದರು. ತಂದೆಯ ಆರೋಗ್ಯ ವಿಚಾರಿಸಿ ಅವರು ಅಕ್ಟೊಬರ್ 13ರಂದು ಶಿರಸಿಗೆ ಮರಳಲು ಬಸ್ ಹತ್ತಿದ್ದರು.
ಆ ಬಸ್ಸು ಶಿರಸಿ ಕೇಂದ್ರ ಬಸ್ ನಿಲ್ದಾಣದ ಬಳಿ ನಿಂತಿದ್ದು, ಹೊಸ ಬಸ್ ನಿಲ್ದಾಣದ ಬಳಿ ಬೈಕ್ ಇತ್ತು. ಬೈಕಿನ ಬಳಿ ತೆರಳುವುದಕ್ಕಾಗಿ ನಂದಿನಿ ಅಂಬಿಗ ಹಾಗೂ ರಾಜು ಪೂಜಾರಿ ಅವರು ನಡೆದು ಹೋಗುತ್ತಿದ್ದರು. ಶಿರಸಿಯ ಸಿಪಿ ಬಜಾರ್, ಝೂ ಸರ್ಕಲ್ ದಾಟಿದ ಅವರಿಬ್ಬರು ಹುಲೆಕಲ್ ರಸ್ತೆ ಕಡೆ ತಿರುಗಿದ್ದರು. ರಾತ್ರಿ 11.15ಕ್ಕೆ ಅವರು ಹುಲೆಕಲ್ ರಸ್ತೆಯ ಪೊಲೀಸ್ ಕ್ವಾಟರ್ಸ ಬಳಿ ತಲುಪಿದ್ದು, ಆಗ ವೇಗವಾಗಿ ಕಾರೊಂದು ನುಗ್ಗಿ ಬಂದಿತು.
ನಡೆದು ಹೋಗುತ್ತಿದ್ದ ರಾಜು ಪೂಜಾರಿ ಅವರಿಗೆ ಆ ಕಪ್ಪು ಬಣ್ಣದ ಕಾರು ಡಿಕ್ಕಿಯಾಯಿತು. ಪರಿಣಾಮ ರಾಜು ಪೂಜಾರಿ ಅವರ ಹಣೆ, ಕೈ, ಕಾಲಿಗೆ ಗಾಯವಾಯಿತು. ಡಿಕ್ಕಿ ಹೊಡದ ಕಾರು ಸ್ಥಳದಲ್ಲಿ ನಿಲ್ಲಲಿಲ್ಲ. ಗಾಯಾಳುವಿನ ಉಪಚಾರವನ್ನು ಮಾಡಲಿಲ್ಲ. ಹೀಗಾಗಿ ನಂದಿನಿ ಪೂಜಾರಿ ಅವರು ರಾಜು ಪೂಜಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಅದಾದ ನಂತರ ಅಪರಿಚಿತ ಕಪ್ಪು ಕಾರಿನ ವಿರುದ್ಧ ಕ್ರಮಕ್ಕಾಗಿ ಅವರು ಪೊಲೀಸರ ಮೊರೆ ಹೋದರು. ಶಿರಸಿ ಸಂಚಾರ ಪೊಲೀಸ್ ಠಾಣೆಯವರು ಈ ಪ್ರಕರಣ ದಾಖಲಿಸಿದ್ದು, ಕಪ್ಪು ಕಾರಿನ ಹುಡುಕಾಟ ನಡೆಸಿದ್ದಾರೆ.