ಹೊಟೇಲ್ ಮಾಲಕರ ಆಮೀಷಕ್ಕೆ ಒಳಗಾದ ಮಾಜಾಳಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ರಾಜೇಶ ನಾಯ್ಕ ಅವರು ಕೊರೊನಾ ನೆಪವಡ್ಡಿ ಅವರ ತೆರಿಗೆ ಮನ್ನಾ ಮಾಡಲು ಮುಂದಾಗಿದ್ದಾರೆ. 50 ಸಾವಿರ ರೂ ತೆರಿಗೆ ಪಾವತಿಸುವವರಿಗೆ ಶೇ 50ರ ರಿಯಾಯತಿ ಘೋಷಿಸಿ 25 ಸಾವಿರ ರೂ ಮಾತ್ರ ವಸೂಲಿ ಮಾಡಲು ಅವರು ಆಸಕ್ತಿವಹಿಸಿದ್ದಾರೆ.
ಮಾಜಾಳಿ ಭಾಗದ ಕೆಲ ಹೊಟೇಲ್ ಮಾಲಕರು ಕಳೆದ ಐದು ವರ್ಷದಿಂದ ತೆರಿಗೆ ಉಳಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತ ಅಧಿಕಾರಿಗಳು ಸಹ ಅದನ್ನು ವಸೂಲಿ ಮಾಡುವ ಸಾಹಸ ನಡೆಸಿಲ್ಲ. ಆದರೆ, ಇದೀಗ ಆ ತೆರಿಗೆಯಲ್ಲಿ ಶೇ 50ರಷ್ಟು ವಿನಾಯತಿ ನೀಡುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಅಲ್ಲಿನ ಪಿಡಿಓ ರಾಜೇಶ ನಾಯ್ಕ ಅವರು ಇದಕ್ಕೆ ಕೊರೊನಾ ಕಾರಣ ನೀಡಿದ್ದಾರೆ. ಕೋವಿಡ್ ಕಾರಣ ಹೊಟೇಲಿನವರು ನಷ್ಟ ಅನುಭವಿಸಿದ್ದು, ಅದಕ್ಕಾಗಿ ಈ ರಿಯಾಯತಿ ಎಂದವರು ಠರಾವು ಸಹ ಮಾಡಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಸರ್ಕಾರದ ಪೂರ್ವಾನುಮತಿ ಅಥವಾ ಉನ್ನತಾಧಿಕಾರಿಗಳ ನಿರ್ದಿಷ್ಟ ನಿಯಮವಿಲ್ಲದೆ ಈ ರೀತಿ ವಿನಾಯತಿ ನೀಡಲು ಸಾಧ್ಯವಿಲ್ಲ. ಅದೂ ಸಾಮಾನ್ಯ ಸಭೆಯ ಠರಾವಿನ ಮೂಲಕವೇ ವಾಣಿಜ್ಯ ತೆರಿಗೆ ಕಡಿಮೆ ಮಾಡಲು ಅವಕಾಶವೇ ಇಲ್ಲ. ಅದಾಗಿಯೂ, ಲಕ್ಷಾಂತರ ರೂ ವ್ಯವಹಾರ ಮಾಡುವ ಹೊಟೇಲ್ ಮಾಲಕರ ಮೇಲೆ ಪಿಡಿಓ ಅನುಕಂಪ ತೋರಿದ್ದಾರೆ. ಕೋವಿಡ್ ನೆಪವೊಡ್ಡಿ ಸಾರ್ವಜನಿಕ ಹಾಗೂ ಪಂಚಾಯತ್ ಆದಾಯಕ್ಕೆ ಪಿಡಿಓ ಅಡಚಣೆ ಮಾಡಿದ ಬಗ್ಗೆ ಜಿಲ್ಲಾ ಪಂಚಾಯತಗೆ ದೂರು ಸಲ್ಲಿಕೆಯಾಗಿದೆ.