ಸಿದ್ದಾಪುರ ಕೊಂಡ್ಲಿ ಹಾಳದಕಟ್ಟಾದ ರಾಜು ಜಾದವ್ ಅವರ ಮನೆಗೆ ನುಗ್ಗಿ 2 ಸಾವಿರ ರೂ ಕದ್ದಿದ್ದ ಮೂವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆ ಕಳ್ಳರು 330ರೂ ಹಣ ಬಿಟ್ಟು ಉಳಿದವನ್ನು ಖರ್ಚು ಮಾಡಿದ್ದು, ಕಳ್ಳತನಕ್ಕೆ ಬಳಸಿದ್ದ 2 ಲಕ್ಷ ರೂ ಮೌಲ್ಯದ ಕಾರನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಶಿವಮೊಗ್ಗ ಮೂಲದ ರಾಜು ಉಮೇಶ ಜಾದವ್ ಅವರು ಕಿರಾಣಿ ಅಂಗಡಿ ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ. ಅಕ್ಟೊಬರ್ 3ರಂದು ಅವರು ಅವರು ಮನೆಗೆ ಬೀಗ ಹಾಕಿ ಆಸ್ಪತ್ರೆಗೆ ಹೋಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಹಾಗೂ ಮಾನಸಿಕ ಅಸ್ವಸ್ಥರಾಗಿರುವ ತಮ್ಮನಿಗೆ ಚಿಕಿತ್ಸೆ ಕೊಡಿಸಿದ ಅವರು ಅಕ್ಟೊಬರ್ 5ರಂದು ಮನೆಗೆ ಮರಳಲು ನಿರ್ಧರಿಸಿದ್ದರು. ಮನೆಯ ಬೀಗ ಒಡೆದ ಬಗ್ಗೆ ಅಕ್ಕಪಕ್ಕದವರು ಅವರಿಗೆ ಫೋನ್ ಮಾಡಿ ತಿಳಿಸಿದ್ದು, ತಕ್ಷಣ ಅವರು ಅಲ್ಲಿಗೆ ದೌಡಾಯಿಸಿದರು. ಆಗ, ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು.
ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಒಡೆದು ಒಳಗೆ ನುಗ್ಗಿದ್ದು, ಕಪಾಟಿನಲ್ಲಿದ್ದ 2 ಸಾವಿರ ರೂ ಹಣ ಕದ್ದಿದ್ದರು. ಈ ಬಗ್ಗೆ ರಾಜು ಜಾದವ್ ಅವರು ಪೊಲೀಸ್ ದೂರು ನೀಡಿದ್ದರು. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಗೋವಿಂದಪ್ಪ ತೊಳೆಪ್ಪ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಕೃಷ್ಣ ಹುಸೇನ ಮುಳಗುಂದ ಹಾಗೂ ಹುಬ್ಬಳ್ಳಿಯ ತಾರೆಹಾಳ ರಸ್ತೆಯ ಗಣೇಶ್ ಗಂಗಪ್ಪ ಅವರು ಈ ಕಳ್ಳತನ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡು ಅವರನ್ನು ಬಂಧಿಸಿದರು. ಅವರ ಜೊತೆಯಿದ್ದ ರಾಯಭಾಗದ ರಾಯಪ್ಪ ಗಂಗಪ್ಪ ಯಲ್ಲಪ್ಪ ಕುಂಚಿಕೊರವ ಹಾಗೂ ಚಿಂಚಲಿಯ ಮಂಜು ಖಂಡು ವಡ್ಡರ ಅವರು ತಲೆಮರೆಸಿಕೊಂಡಿದ್ದಾರೆ.