ಉತ್ತರ ಕನ್ನಡ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಸದಸ್ಯ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಈ ಜಿಲ್ಲಾ ಪಂಚಾಯತದಲ್ಲಿ 27 ಕ್ಷೇತ್ರಗಳಿಗೆ ಹಾಗೂ ತಾಲೂಕು ಪಂಚಾಯತದಲ್ಲಿ 65 ಸ್ಥಾನಗಳಿಗೆ ಮಹಿಳಾ ಮೀಸಲಾತಿ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 53 ಜಿಲ್ಲಾ ಪಂಚಾಯತ್ ಸ್ಥಾನಗಳಿವೆ. 118 ತಾಲೂಕು ಪಂಚಾಯತ ಸ್ಥಾನಗಳಿವೆ. ಈ ಎರಡು ಕಡೆ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಸಿಕ್ಕಿದೆ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಮೀಸಲಾತಿ ನಿಗದಿಪಡಿಸಿದೆ. ಇದರೊಂದಿಗೆ ಈ ಹಿಂದೆ ಪ್ರಕಟಿಸಿದ್ದ ಅಧಿಸೂಚನೆಗಳನ್ನು ರದ್ದುಗೊಳಿಸಲಾಗಿದೆ.
ಜಿಲ್ಲಾ ಪಂಚಾಯತ್ 53 ಸ್ಥಾನಗಳಲ್ಲಿ ಸಾಮಾನ್ಯ ವರ್ಗಕ್ಕೆ 30, ಹಿಂದುಳಿದ ವರ್ಗ ‘ಅ’ಕ್ಕೆ 14, ಹಿಂದುಳಿದ ವರ್ಗ ‘ಬ’ಕ್ಕೆ 4, ಪರಿಶಿಷ್ಟ ಜಾತಿಗೆ 4 ಹಾಗೂ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ನಿಗದಿಯಾಗಿದೆ. ಈ ಪೈಕಿ ಸಾಮಾನ್ಯ ವರ್ಗದ 15, ಹಿಂದುಳಿದ ವರ್ಗ ‘ಅ’ದ 7, ಹಿಂದುಳಿದ ವರ್ಗ ‘ಬ’ದ 2, ಪರಿಶಿಷ್ಟ ಜಾತಿಯ 2 ಹಾಗೂ ಪರಿಶಿಷ್ಟ ಪಂಗಡದ ಒಂದು ಸ್ಥಾನ ಸೇರಿದಂತೆ ಒಟ್ಟು 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾಲೂಕು ಪಂಚಾಯತ್ ಯ 118 ಸ್ಥಾನಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಪರಿಶಿಷ್ಟ ಜಾತಿಗೆ 13, ಪರಿಶಿಷ್ಟ ಪಂಗಡಕ್ಕೆ 12, ಹಿಂದುಳಿದ ವರ್ಗ ‘ಅ’ಕ್ಕೆ 25, ಹಿಂದುಳಿದ ವರ್ಗ ‘ಬ’ಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 65 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 12, ಪರಿಶಿಷ್ಟ ಪಂಗಡದ 12, ಹಿಂದುಳಿದ ವರ್ಗ ‘ಅ’ದ 15 ಹಾಗೂ ಸಾಮಾನ್ಯ ವರ್ಗದ 26 ಸ್ಥಾನಗಳು ಸೇರಿದಂತೆ ಒಟ್ಟು 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.