ಕಳೆದ ಎಂಟು ವರ್ಷಗಳಿಂದ ಅನಾಥ ಸ್ಥಿತಿಯಲ್ಲಿದ್ದ ಯಲ್ಲಾಪುರದ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಇದೀಗ ಮರು ಚೈತನ್ಯ ಸಿಕ್ಕಿದೆ. ವೃದ್ಧರ ಪಾಲಿಗೆ ಆಶಾಕಿರಣವಾಗಬಹುದಾದ `ವಿಶ್ರಾಮಧಾಮ’ ಇಲ್ಲಿ ಸ್ಥಾಪನೆಯಾಗಿದೆ.
ಮುಂಡಗೋಡು ರಸ್ತೆಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಆಸ್ತಿ ಮಾರಾಟವಾಗಿದೆ’ ಎಂದು ಕೆಲ ವರ್ಷಗಳಿಂದ ಊಹಾಪೋಹಗಳು ಕೇಳಿ ಬಂದಿತ್ತು. ಆದರೆ, ಆ ಎಲ್ಲಾ ಊಹಾಪೋಹಗಳಿಗೆ ಈಶ್ವರಿ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಬಸವರಾಜ ರಾಜಋಷಿ ಅವರು ತೆರೆ ಎಳೆದಿದ್ದಾರೆ. `ಯಾರೇ ಖರೀದಿಗೆ ಬಂದರೂ ಸಂಸ್ಥೆ ಮಾರಾಟವಾಗಲು ಬಿಡುವುದಿಲ್ಲ’ ಎಂದವರು ಹೇಳಿದ್ದಾರೆ.
`ಸಾಕಷ್ಟು ಕಷ್ಟಪಟ್ಟು ಇಲ್ಲಿ ಸಂಸ್ಥೆ ಕಟ್ಟಲಾಗಿದೆ. ಸಾವಿರಾರು ಜನ ಸಹೋದರ-ಸಹೋದರಿಯರು ಇಲ್ಲಿ ಕಟ್ಟಡ ಕಟ್ಟಲು ಶ್ರಮಿಸಿದ್ದಾರೆ. ಸರ್ಕಾರದಿಂದ ಯಾವ ಅನುದಾನ ಪಡೆಯದೇ ಸ್ವಂತ ಶ್ರಮದಿಂದ ಈ ತಪೋವನ ಸಿದ್ಧಗೊಂಡಿದೆ. ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕೆಲಸ ಶುರು ಮಾಡಿದ ಕಾರಣ ಯಲ್ಲಾಪುರದ ಈಶ್ವರಿ ವಿಶ್ವವಿದ್ಯಾಲಯದ ಕಡೆ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ತಪೋವನದ ಚಟುವಟಿಕೆಗಳು ಆರಂಭವಾಗಿದೆ’ ಎಂದವರು ವಿವರಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದಲ್ಲಿಯೇ ಜೀವನ ಸವೆಸಿ ವೃದ್ಧಾಪ್ಯದಲ್ಲಿರುವವರ ವಿಶ್ರಾಂತಿಗಾಗಿ ಈ ವಿಶ್ರಾಮಧಾಮ ಆರಂಭಿಸಿದ್ದೇವೆ. ಆಧ್ಯಾತ್ಮದ ಆಸಕ್ತರ ತಪಸ್ಸಿಗೆ ಆಸಕ್ತರಾದವರಿಗೆ ಇಲ್ಲಿ ಆಹ್ವಾನವಿದ್ದು, ಸರ್ವಧರ್ಮ ಸಮನ್ವಯವಾದ ಆಧ್ಯಾತ್ಮದ ಬೋಧನೆಯನ್ನು ತಪೋವನದಲ್ಲಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
`ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವ ಕಾರ್ಯವನ್ನು ಈ ಹಿಂದೆ ತಪೋವನದಲ್ಲಿ ಮಾಡಲಾಗುತ್ತಿತ್ತು. ಕರೊನಾ ಸಂದರ್ಭದಲ್ಲಿ ಅದನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಸರ್ಕಾರದ ತರಬೇತಿ ಯೋಜನೆಗಳು ಶುರುವಾದರೆ ಗ್ರಾಮೀಣ ಭಾಗದ ಮಕ್ಕಳ ವ್ಯಕ್ತಿತ್ವ ಮೌಲ್ಯಯುತವಾಗಿ ಬೆಳೆಯಲು ಸಾಧ್ಯ’ ಎಂದವರು ಅನಿಸಿಕೆಹಂಚಿಕೊAಡರು.
ಹುಬ್ಬಳ್ಳಿ ವಲಯ ಸಂಚಾಲಕಿ ನಿರ್ಮಲಾ, ಗುಂತಕಲ್ ಸಂಚಾಲಕಿ ಶಕುಂತಲಾ, ಹುಬ್ಬಳ್ಳಿಯ ವಿಜಯಾ, ಧಾರವಾಡದ ಸಂಚಾಲಕಿ ಜಯಂತಿ, ದಾವಣಗೆರೆ ತಪೋವನದ ಸಂಚಾಲಕಿ ಲೀಲಾ, ಶಿರಸಿಯ ಸಂಚಾಲಕಿ ವೀಣಾ ಅವರು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು.