ಧರ್ಮಸ್ಥಳ ಸಂಘದಲ್ಲಿ ಸೇವೆ ಮಾಡುವ ಮಿರ್ಜಾನಿನ ರೇಖಾ ಅಂಬಿಗ ಅವರ ಮನೆಗೆ ನುಗ್ಗಿದ್ದ ಮಾಸ್ಕ್ ಮ್ಯಾನ್’ನ ಮುಖವಾಡ ಬಯಲಾಗಿದೆ. ಒಂಟಿ ಮಹಿಳೆಯ ಮನೆಗೆ ನುಗ್ಗಿ ರಂಪಾಟ ಮಾಡಿದ್ದ ಅದೇ ಊರಿನ ಶ್ರೀಧರ ಅಂಬಿಗ ಅವರು ಜೈಲು ಸೇರಿದ್ದಾರೆ.
ಕುಮಟಾ ಮಿರ್ಜಾನಿನ ತಾರಿಬಾಗಿಲುವಿನಲ್ಲಿ ರೇಖಾ ದುರ್ಗು ಅಂಬಿಗ ಅವರು ವಾಸವಾಗಿದ್ದಾರೆ. ಧರ್ಮಸ್ಥಳ ಸಂಘದಲ್ಲಿ ಸೇವಾದಾರರಾಗಿ ಅವರು ಜೀವನ ನಡೆಸುತ್ತಿದ್ದಾರೆ. ಅದೇ ಊರಿನ ಶ್ರೀಧರ ನಾರಾಯಣ ಅಂಬಿಗ ಅವರು ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ವೇಳೆ ಮಹಿಳೆಯರ ಮನೆಗೆ ನುಗ್ಗುವ ಚಾಳಿಹೊಂದಿದ್ದಾರೆ. ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ನುಗ್ಗುವ ಶ್ರೀಧರ ಅಂಬಿಗ ಅವರು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚಲ್ಲಾಪಿಲ್ಲಿ ಮಾಡಿ ಪರಾರಿಯಾಗುತ್ತಿದ್ದಾರೆ.
ಸೆಪ್ಟೆಂಬರ್ 25ರ ರಾತ್ರಿ 12.30ರ ನಂತರ ರೇಖಾ ಅಂಬಿಗ ಅವರ ಮನೆಗೆ ಶ್ರೀಧರ ಅಂಬಿಗ ಅವರು ನುಗ್ಗಿದ್ದಾರೆ. ಕಪೌಂಡ್ ಹಾರಿ ಒಳಗೆ ಬಂದ ಶ್ರೀಧರ ಅಂಬಿಗ ಅವರು ಮುಖ್ಯ ಬಾಗಿಲಿನ ಮೂಲಕವೇ ಮನೆ ಪ್ರವೇಶಿಸಿದ್ದಾರೆ. 1.15ರವರೆಗೂ ಅಲ್ಲಿ ಸುತ್ತಾಟ ನಡೆಸಿದ ಅವರು ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲ ಚಲ್ಲಾಪಿಲ್ಲಿ ಮಾಡಿದ್ದಾರೆ. ಮನೆಯಲ್ಲಿ ಏನೂ ಸಿಗದೇ ಅಲ್ಲಿಂದ ಹಾಗೇ ಹೋಗಿದ್ದಾರೆ.
ಮನೆಯಲ್ಲಿನ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿರುವ ಬಗ್ಗೆ ರೇಖಾ ಅಂಬಿಗ ಅವರು ನೋಡಿ ಕಂಗಾಲಾಗಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಮಾಸ್ಕ್ಧರಿಸಿದ ವ್ಯಕ್ತಿಯೊಬ್ಬರು ಈ ರೀತಿ ಮಾಡಿರುವುದು ಗೊತ್ತಾಗಿದೆ. ಆ ಚಹರೆ ಗಮನಿಸಿ ವಿಚಾರಣೆ ನಡೆಸಿದಾಗ ಅದೇ ಊರಿನ ಶ್ರೀಧರ ಅಂಬಿಗ ಅವರ ಕಳ್ಳಾಟ ಬೆಳಕಿಗೆ ಬಂದಿದೆ. ಶ್ರೀಧರ ಅಂಬಿಗ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರೇಖಾ ಅಂಬಿಗ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ಆ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಸೊರಬದಲ್ಲಿ ಅಡಗಿದ್ದ ಶ್ರೀಧರ ಅಂಬಿಗ ಅವರನ್ನು ಬಂಧಿಸಿದ್ದಾರೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಜೊತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಭಟ್ಕಳ ಡಿವೈಎಸ್ಪಿ ರಾನು ಗುಪ್ತ, ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ ಸೇರಿ ಕಾರ್ಯಾಚರಣೆಯ ಯೋಜನೆ ಮಾಡಿದ್ದಾರೆ. ಪಿಸೈ ಸಾವಿತ್ರಿ ನಾಯಕ, ವಿಠ್ಠಲ ಮಲವಡಕರ್ ಅವರ ಜೊತೆ ಸಿಬ್ಬಂದಿ ಗಣೇಶ ನಾಯಕ, ದಯಾನಂದ ನಾಯಕ, ಗುರು ನಾಯಕ, ಕಿರಣ ನಾಯ್ಕ ಅವರು ಆರೋಪಿಯನ್ನು ಬಂಧಿಸಿದ್ದಾರೆ.