ಹೊನ್ನಾವರದ ಕಾಸರಕೋಡಿನ ಬಳಿಯಿರುವ ಹಿರೇಮಠ್ ಅಂಗನವಾಡಿ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಕಟ್ಟಡ ಶಿಥಿಲಗೊಂಡಿದ್ದು, ಕಟ್ಟಡ ಸುತ್ತ ಗಿಡಗಂಟಿಗಳು ಹೇರಳವಾಗಿ ಬೆಳೆದಿದೆ. ಹೀಗಾಗಿ ಅಂಗನವಾಡಿಯಲ್ಲಿನ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿದೆ.
ಈ ಅಂಗನವಾಡಿಯ ಮೇಲ್ಚಾವಣಿಗೆ ಅಂಟಿರುವ ರೀಪು-ಪಕಾಸಿಗೆ ವರಲೆ ಕಾಟ ಜೋರಾಗಿದೆ. ಮರದ ನಾಟಾಗಳು ತುಂಡಾಗುತ್ತಿದ್ದು, ಮಕ್ಕಳ ಮೇಲೆ ಬೀಳುವ ಅಪಾಯವಿದೆ. ಅಂಗನವಾಡಿ ಸುತ್ತಲಿನ ಪ್ರದೇಶ ಅಶುಚಿತ್ವದಿಂದ ಕೂಡಿದೆ. ಅಲ್ಲಿ ಬೆಳೆದ ಗಿಡಗಳ ಮೂಲಕ ಹಾವು-ಹುಳ ಹುಪಡಿಗಳು ಕಟ್ಟಡದ ಒಳಗೆ ನುಸುಳುತ್ತಿವೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಅಧಿಕಾರಿಗಳು ಮಾತ್ರ ಅಂಗನವಾಡಿ ಮಕ್ಕಳ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಈ ಅಂಗನವಾಡಿಗೆ ಸದ್ಯ ನೀರಿನ ಸಮಸ್ಯೆ ಸಹ ಕಾಡುತ್ತಿದೆ. ದೂರದಲ್ಲಿರುವ ಬೋರ್ ನೀರು ಅಂಗನವಾಡಿಗೆ ಬರುತ್ತಿಲ್ಲ. ಶಿಕ್ಷಕರು ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಮೀಪದ ಸರ್ಕಾರಿ ಶಾಲೆ ಸಹ ಮುಚ್ಚಿ ಹೋಗಿದ್ದು, ಅಲ್ಲಿಯೂ ಲಕ್ಷಾಂತರ ರೂ ಮೌಲ್ಯದ ಪೀಠೋಪಕರಣಗಳು ಹಾಳಾಗುತ್ತಿದೆ.
ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಗುರುವಾರ ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಅಂಗನವಾಡಿಯ ಪರಿಸ್ಥಿತಿ ಗಮನಿಸಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದವರು ಆಗ್ರಹಿಸಿದರು.